ಕೇಸರಿ ಧ್ವಜ ವಿಚಾರ, ನಿಲುವಳಿ ಸೂಚನೆ ತಿರಸ್ಕಾರ; ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ಪ್ಲಾನ್

ಬೆಂಗಳೂರು: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿರುದ್ಧ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿ, ಸದನದ ಕಲಾಪವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ. ಈ ನಡುವೆ ವಿಧಾನಮಂಡಲದ ಉಭಯಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ.
ಬುಧವಾರ ಭೋಜನ ವಿರಾಮದ ನಂತರ ಸಂಜೆ ನಾಲ್ಕು ಗಂಟೆಗೆ ವಿಧಾನಸಭೆ ಕಲಾಪ ಆರಂಭವಾದಾಗ ರಾಷ್ಟ್ರಧ್ವಜದೊಂದಿಗೆ ಕಾಂಗ್ರೆಸ್ ಸದಸ್ಯರು ಸದನಕ್ಕೆ ಆಗಮಿಸಿ, ಭೋಜನ ವಿರಾಮಕ್ಕೂ ಮುನ್ನ ಸ್ಪೀಕರ್ ಪೀಠದ ಎದುರು ಆರಂಭಿಸಿದ್ದ ಧರಣಿಯನ್ನು ಮುಂದುವರಿಸಿದರು.
ರಾಷ್ಟ್ರಧ್ವಜ ಹಿಡಿದು ಬಂದ ಕಾಂಗ್ರೆಸ್ ಸದಸ್ಯರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಧರಣಿ ಪ್ರತಿಭಟನೆಗೆ ರಾಷ್ಟ್ರಧ್ವಜ ಬಳಕೆ ಮಾಡಬಾರದು. ಇದು ಪಕ್ಷದ ಧ್ವಜವಲ್ಲ. ರಾಷ್ಟ್ರ ಧ್ವಜಕ್ಕೆ ಈ ರೀತಿ ಅವಮಾನ ಮಾಡುವುದು ಸರಿ ಇಲ್ಲ. ರಾಷ್ಟ್ರಧ್ವಜಕ್ಕೆ ಅದರದೇ ಆದ ಗೌರವವಿದೆ ಎಂದು ಕೈ ಸದಸ್ಯರ ವಿರುದ್ಧ ಗರಂ ಆದರು.
ಈ ಹಂತದಲ್ಲಿ ಎದ್ದು ನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರಧ್ವಜವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅರೋಪಿಸಿ, ರಾಷ್ಟ್ರಧ್ವಜಕ್ಕೆ ಅದರದೇ ಆದ ಧ್ವಜ ಸಂಹಿತೆ ಇದೆ. ಅದನ್ನು ಕಾಂಗ್ರೆಸ್ ಸದಸ್ಯರು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.
ನಂತರ ಸಚಿವ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಡಿಸಿರುವ ನಿಲುವಳಿ ಸೂಚನೆ ಮಂಡನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ ಈ ನಿಲುವಳಿ ಸೂಚನೆಯನ್ನು ತಿರಸ್ಕರಿಸಲಾಗಿದೆ ಎಂದು ಜೆಡಿಎಸ್ ಪ್ರಸ್ತಾಪಿಸಲು ಉದ್ದೇಶಿಸಿರುವ ಇನ್ನೊಂದು ನಿಲುವಳಿ ಸೂಚನೆಗೆ ವಿಷಯ ಪ್ರಸ್ತಾಪಿಸಲು ಅವಕಾಶ ಕಲ್ಪಿಸಿದರು.
ಇದರ ವಿರುದ್ಧ ಕಾಂಗ್ರೆಸ್ ಸದಸ್ಯರು ದಿಕ್ಕಾರ, ಬೊಲೋ ಭಾರತ್ ಮಾತಾಕಿ ಜೈ, ಬೇಕೆ ಬೇಕು ನ್ಯಾಯ ಬೇಕು ಮತ್ತಿತರ ಘೋಷಣೆ ಕೂಗಿದ ಪರಿಣಾಮ ಸದನದಲ್ಲಿ ಗದ್ದಲ-ಗೊಂದಲದ ವಾತಾವರಣ ಏರ್ಪಟ್ಟಿತು. ಗದ್ದಲದ ನಡುವೆ ಸ್ಪೀಕರ್ ಸದನದ ಕಲಾಪವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
