Breaking NewsLatestವಿದೇಶಸುದ್ದಿ

ಉಕ್ರೇನ್ ನಲ್ಲಿ ಭಾರತೀಯರಿಗೆ ಥಳಿತ : ವಿದ್ಯಾರ್ಥಿನಿಯರ ಒಡಲಾಳದ ನೋವಿನ ಸ್ಥಿತಿ ಏನು ಗೊತ್ತಾ…?

ಕೀವ್: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಆಘಾತಕಾರಿ ಘಟನೆಯೊಂದು ನಡೆದಿದೆ. ರಷ್ಯಾ ಯುದ್ಧೋನ್ಮಾದದಿಂದ ಉಕ್ರೇನ್ ಮೇಲೆ ದಾಳಿ ಮುಂದುವರಿಸಿದೆ. ಈ ನಡುವೆ ಖಾರ್ಕೀವ್ ಹಾಗೂ ಕೀವ್ ಗಡಿಯತ್ತ ಜನರು ದೌಡಾಯಿಸುತ್ತಿದ್ದಾರೆ. ತವರಿಗೆ ಮರಳಲು ತವಕಿಸುತ್ತಿರುವ ಭಾರತೀಯರು ಗಡಿ ಭಾಗಕ್ಕೆ ತೆರಳುತ್ತಿದ್ದಾಗ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಆರೋಪ ಮಾಡಿರುವುದು ಭಾರತೀಯ ವಿದ್ಯಾರ್ಥಿಗಳು. ಯುದ್ಧಪೀಡಿತ ಉಕ್ರೇನ್ ನಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ. ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತವಾಗಿ ಮರಳಲು ಭಾರತೀಯರು ಹರಸಾಹಸ ಪಡುತ್ತಿದ್ದಾರೆ.

ರಷ್ಯಾ ಅಣುಬಾಂಬ್ ದಾಳಿ ನಡೆಸುವ ಬೆದರಿಕೆ ಹಾಕಿದ ಬಳಿಕವಂತೂ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಕೀವ್​ ಹಾಗೂ ಖಾರ್ಕೀವ್ ನಗರಗಳಿಂದ ಪೋಲಂಡ್ ಗಡಿಯತ್ತ ಹೋಗುತ್ತಿದ್ದಾರೆ. ಈ ನಡುವೆ ಉಕ್ರೇನ್ ಪೊಲೀಸರು ಮಹಿಳೆಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಗುಂಡಿನ ಶಬ್ಧ ಹಾಗೂ ಮಹಿಳೆ ಕಿರುಚುತ್ತಿರುವುದು ರೆಕಾರ್ಡ್ ಆಗಿದೆ. ಸೂಟ್ ಕೇಸ್ ಗಳನ್ನು ರಸ್ತೆಯಲ್ಲಿ ಬಿಸಾಡಲಾಗಿದೆ. ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸುತ್ತಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೆಣಸಿನ ಪುಡಿ ಎರಚಿದ ಪರಿಣಾಮ ನಮ್ಮವರು ಪ್ರಜ್ಞೆ ತಪ್ಪಿದರು‌. ಪೊಲೀಸರ ಈ ಪೈಶಾಚಿಕ ಕೃತ್ಯದಿಂದ ಬಹಳಷ್ಟು ಜನರು ತೊಂದರೆ ಅನುಭವಿಸಿದರು. ಸ್ಲೊವೋಕಿಯಾದ ರಾಯಭಾರ ಕಚೇರಿಯನ್ನು ಸಂಪರ್ಕ ಮಾಡಿದ್ದೇವೆ. ಆದ್ರೆ ಉಕ್ರೇನ್ ರಾಯಭಾರ ಕಚೇರಿ ಸಂಪರ್ಕಕ್ಕೆ ಸಿಗ್ತಾ ಇಲ್ಲ. ಯಾವುದೇ ಸಹಾಯವಾಣಿಗಳು ಕೆಲಸ ಮಾಡುತ್ತಿಲ್ಲ ಎಂದು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಮಾಳವಿಕಾ ಪರಿಸ್ಥಿತಿ ವಿವರಿಸಿದ್ದಾರೆ.

ನಮ್ಮ ಹಾಸ್ಟೆಲ್ ನ ಗೇಟ್ ಮುರಿದು ಪೊಲಿಸರು ಒಳ ಬಂದು ಸ್ಥಳ ಗುರುತು ಮಾಡುವ ಕಾರ್ಯ ಮಾಡಿದರು. ಆದ್ರೆ ಅವರು ರಷ್ಯಾ ಪೊಲೀಸರಾ ಅಥವಾ ಉಕ್ರೇನ್ ಪೊಲೀಸರಾ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದೆವು. ನಮಗಂತೂ ಸ್ವಲ್ಪಮಟ್ಟಿನ ರಕ್ಷಣೆಯೂ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಉಕ್ರೇನಿನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು ಪರಿಸ್ಥಿತಿಯು ಗಂಭೀರವಾಗಿದ್ದರೂ ಉಕ್ರೇನಿನ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದಾರೆ ಎಂದು ಉಕ್ರೇನಿನ ರಾಯಭಾರಿ ತಿಳಿಸಿದ್ದಾರೆ.

ಸಹಾಯ ಮಾಡಿ ಎಂದು ಮನವಿ ಮಾಡಿದ ವಿದ್ಯಾರ್ಥಿನಿ :

ರಷ್ಯಾದ ಪಡೆಗಳಿಂದ ಸುತ್ತುವರಿದಿರುವ ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಸಿಲುಕಿಕೊಂಡ ನಂತರ, ಅವರು ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ವಿಡಿಯೋದಲ್ಲಿ ಲಕ್ನೋ ಮೂಲದ ವಿದ್ಯಾರ್ಥಿನಿ ಗರಿಮಾ ಮಿಶ್ರಾ ಎಂದು ತಿಳಿಸಿದ್ದಾರೆ.

ನಮಗೆ ಯಾರೂ ಸಹಾಯ ಮಾಡುತ್ತಿಲ್ಲ ಮತ್ತು ನಮಗೆ ಯಾವುದೇ ಸಹಾಯ ಸಿಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ವಿದ್ಯಾರ್ಥಿಗಳ ಗುಂಪು ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ರಷ್ಯಾದ ಸೈನ್ಯವು ಅವರ ಮೇಲೆ ಗುಂಡು ಹಾರಿಸಿತು ಎಂದು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ ಎಂದು ಪರಿಸ್ಥಿತಿ ವಿವರಿಸಿದ್ದಾಳೆ. ಅಲ್ಲದೇ ತಮ್ಮ ಗುಂಪಿನ ಜೊತೆಯಿದ್ದ ಹುಡುಗಿಯರನ್ನು ಅಪಹರಿಸಲಾಗಿದೆ ಎಂದು ಕಣ್ಣೀರು ಹಾಕಿದ್ದು, ತಮ್ಮ ಸಹಾಯಕ್ಕೆ ಧಾವಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯವರಿಗೆ ಸಹಾಯ ಮನವಿ ಮಾಡಿದ್ದಾಳೆ.

ವಿದ್ಯಾರ್ಥಿಗಳಿಗೆ ಸೂಚನೆ ಕೊಟ್ಟ ರಾಯಬಾರಿ ಕಚೇರಿ :

ವಿದೇಶಾಂಗ ಇಲಾಖೆ ಗಮನಕ್ಕೆ ತಾರದೇ ಯಾರೂ ಕೂಡ ನೇರವಾಗಿ, ಬೇರೆ ದೇಶಗಳಿಗೆ ಸಾಗಲು ಉಕ್ರೇನ್‌ ಗಡಿಗೆ ಹೋಗಬಾರದು ಎಂದು ಭಾರತ ಸರ್ಕಾರವು ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಸೂಚನೆ ಕೊಟ್ಟಿದೆ. ಭಾರತೀಯರು ರೈಲಿನ ಮೂಲಕ ದೇಶದ ಪಶ್ಚಿಮ ಭಾಗಕ್ಕೆ ತಲುಪಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.

ಕೀವ್‌, ಖಾರ್ಕಿವ್‌, ಪೂರ್ವ ಉಕ್ರೇನಿನಲ್ಲಿ ಯುದ್ಧ ತೀವ್ರವಾದ ಹಿನ್ನೆಲೆಯಲ್ಲಿ ನಾಗರಿಕರ ಸಂಚಾರದ ಮೇಲೆ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ ಭಾರತೀಯರು ರೇಲ್ವೆ ಸ್ಟೇಶನ್‌ಗಳಿಗೆ ತೆರಳದಂತೆ ಕೀವ್‌ನಲ್ಲಿರುವ ರಾಯಭಾರ ಕಚೇರಿ ಸೂಚನೆ ನೀಡಿತ್ತು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕೀವ್‌ನಲ್ಲಿ ವಾರಾಂತ್ಯದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ.

ಬೇಸರ ವ್ಯಕ್ತಪಡಿಸಿದ ರಾಹುಲ್​​​ ಗಾಂಧಿ

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ ನೋಡಿ ತುಂಬಾ ನೋವಾಗಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟ್ವೀಟ್​​ ಮಾಡಿದ್ದಾರೆ

ಉಕ್ರೇನ್‌ನ ಪೋಲೆಂಡ್ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಅಲ್ಲಿನ ಯೋಧರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಅವರು, ಬೇಸರ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button