
ರಷ್ಯಾ: ಉಕ್ರೇನ್ ಮೇಲೆ ಸತತ 19 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾ, ಇದೀಗ ಈ ಯುದ್ಧಕ್ಕೆ ನೆರವಾಗುವಂತೆ ತನ್ನ ಮಿತ್ರ ದೇಶ ಚೀನಾದ ನೆರವು ಕೋರಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಹೆಸರು ಹೇಳಬಯಸದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಈ ಸ್ಫೋಟಕ ಮಾಹಿತಿ ನೀಡಿದ್ದಾರೆ. ನ್ಯಾಟೋ ದೇಶಗಳ ತಂಟೆಗೆ ಬಂದರೆ, ಸುಮ್ಮನೆ ಬಿಡಲ್ಲ. ಅದು ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾದರೂ ಪರವಾಗಿಲ್ಲ ಎಂದು ರಷ್ಯಾಕ್ಕೆ ಜೋ ಬೈಡೆನ್ ಎಚ್ಚರಿಕೆ ಮತ್ತು ರಷ್ಯಾ ಮೇಲಿನ ಜಾಗತಿಕ ನಿರ್ಬಂಧಗಳ ಪರಿಣಾಮವನ್ನು ಕಡಿಮೆ ಮಾಡಲು ಚೀನಾ ನೆರವು ನೀಡಿದರೆ ಅದು ತಕ್ಕ ಪಾಠ ಎದುರಿಸಬೇಕಾಗಿ ಬರಲಿದೆ ಎಂಬ ಶ್ವೇತಭವನದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಎಚ್ಚರಿಕೆ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.
ಅಮೆರಿಕದ ಆರೋಪವನ್ನು ಸುಳ್ಳು ಎಂದು ಚೀನಾ ಹಾಗೂ ರಷ್ಯಾ ಸರ್ಕಾರಗಳು ತಳ್ಳಿಹಾಕಿವೆ. ಉಕ್ರೇನ್ ಯುದ್ಧ ನಿಭಾಯಿಸಲು ಬೇಕಾಗುವಷ್ಟುಸೇನೆ ನಮ್ಮ ಬಳಿ ಇದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಇನ್ನೊಂದೆಡೆ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಿಯಾನ್, ‘ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಚೀನಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಆದಾಗ್ಯೂ ಒಂದು ವೇಳೆ ಚೀನಾ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾಕ್ಕೆ ನೆರವು ನೀಡಿದ್ದೇ ಅದಲ್ಲಿ ಅದು ಈಗಾಗಲೇ ನಡೆಯುತ್ತಿರುವ ಯುದ್ಧದ ಕ್ಷೇತ್ರ ವ್ಯಾಪ್ತಿ ಮತ್ತಷ್ಟು ವಿಸ್ತೃತಗೊಳ್ಳುವ ಎಲ್ಲಾ ಆತಂಕವೂ ಎದುರಾಗಿದೆ.
