ವಿಂಬಲ್ಡನ್ ನಲ್ಲಿ ಐತಿಹಾಸಿಕ ಪಂದ್ಯ ಗೆದ್ದ ಸಾನಿಯಾ – ಬೋಪಣ್ಣ

ಲಂಡನ್: ಆಧುನಿಕ ಟೆನಿಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಜಯಗಳಿಸಿ ಇತಿಹಾಸ ನಿರ್ಮಿಸಿದೆ.
ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್ಷಿಪ್ ನ ಮಿಶ್ರಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಭಾರತದವರೇ ಆದ ರಾಮ್ ಕುಮಾರ್ ರಮಾನಾಥನ್ ಮತ್ತು ಅಂಕಿತಾ ರೈನಾ ಜೋಡಿಯನ್ನು 6-2, 7-6(5) ಅಂತರದಲ್ಲಿ ಸೋಲಿಸಿತು. ಈ ಪಂದ್ಯವನ್ನು ಭಾರತ ಮತ್ತು ವಿಂಬಲ್ಡನ್ ಇತಿಹಾಸದಲ್ಲೇ ಐತಿಹಾಸಿಕ ಪಂದ್ಯ ಎಂದೇ ಪರಿಗಣಿಸಲಾಗಿದೆ.
ಗ್ರ್ಯಾನ್ ಸ್ಲ್ಯಾಮ್ ನ ಪ್ರಧಾನ ಸುತ್ತನ್ನು ತಲುಪಲು 21 ಬಾರಿ ಪ್ರಯತ್ನ ಮಾಡಿದ್ದ ರಾಮ್ ಕುಮಾರ್ ರಮಾನಾಥನ್ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಪಂದ್ಯವನ್ನಾಡಿ ನೆಮ್ಮದಿಯ ನಿಟ್ಟುಸಿರಿಟ್ಟರು. ಮೊದಲ ಸೆಟ್ ನಲ್ಲಿ ಸಾನಿಯಾ ಮತ್ತು ಬೋಪಣ್ಣ ಜೋಡಿ ಸುಲಭವಾಗಿ ಜಯ ಗಳಿಸಿತು. ಆದರೆ ಎರಡನೇ ಸೆಟ್ ನಲ್ಲಿ ರಾಮ್ ಕುಮಾರ್ ಮತ್ತು ರೈನಾ ದಿಟ್ಟ ಹೋರಾಟ ನೀಡಿ ಸರ್ವ್ ಬ್ರೇಕ್ ಮಾಡುವ ಮೂಲಕ ಪಂದ್ಯ ಕೆಲಹೊತ್ತು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು.
ಅನುಭವಿ ಆಟಗಾರ ಕನ್ನಡಿಗ ಬೋಪಣ್ಣ ಕೋರ್ಟ್ ನಲ್ಲಿ ಉತ್ತಮ ಸರ್ವ್ ಮತ್ತು ಬೇಸ್ ಲೇನ್ ಹೊಡೆತಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಾನಿಯಾ ಅವರ ಸರ್ವ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ ಹೆಚ್ಚು ಹೆಚ್ಚು ಪಂದ್ಯಗಳನ್ನಾಡುತ್ತ ಅವರು ಮತ್ತೆ ಲಯ ಕಂಡುಕೊಳ್ಳಬಹುದು.
