ಕಾಂಗ್ರೆಸ್ನ ಶಾಮ್ ಘಾಟಗೆ ಮನೆಗೆ ರಮೇಶ್ ಜಾರಕಿಹೊಳಿ ಭೇಟಿ; ಕುತೂಹಲ ಮೂಡಿಸಿದ ನಡೆ

ಬೆಳಗಾವಿ: ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ರಾಜಕೀಯ ವೈರಿ ಶಾಮ್ ಘಾಟಗೆ ಮನೆಗೆ ಭೇಟಿ ನೀಡಿ ಮಾಜಿ ಸಚಿವ ರಮೆಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ಮಾತುಕತೆ ನಡೆಸಿದ್ದಾರೆ.
ಈ ಭೇಟಿ ಬೆಳಗಾವಿ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದ್ದು ಜಾರಕಿಹೊಳಿ ಮುಂದಿನ ನಡೆ ಏನು ಎನ್ನುವುದು ನಿಗೂಢವಾಗಿಯೇ ಉಳಿದಿದೆ.
ರಮೇಶ್ ಜಾರಕಿಹೊಳಿ, ಪುತ್ರ ಅಮರನಾಥ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ, ಅಳಿಯ ಅಂಬಿರಾವ್ ಜಾರಕಿಹೊಳಿ ಸೇರಿ ಶ್ಯಾಮ್ ಘಾಟಗೆ ಮನೆ ಹಾಗೂ ತೋಟಕ್ಕೆ ಭೇಟಿ ನೀಡಿದ್ದಾರೆ. ಮಿತ್ರ ಮಂಡಳಿ ಶಾಸಕರನ್ನು ಭೇಟಿ ಮಾಡುವ ಸುಳೀವೂ ಸಿಕ್ಕಿದೆ.
ಈ ಮಧ್ಯೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮಾತನಾಡಿರುವ ರಮೇಶ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ, ಆದರೆ ರಾಜೀನಾಮೆ ನೀಡುವ ವಿಚಾರ ಮುಗಿದ ಅಧ್ಯಾಯ ಎಂಡಿದ್ದಾರೆ. ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ್ದಾರೆ. ಹಿರಿಯರ ಸಲಹೆ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ ಎಂದಿದ್ದಾರೆ.
