ಸಿಎಂ ಬಸವರಾಜ ಬೊಮ್ಮಾಯಿರಿಂದ ಅಪ್ಪು ಪುತ್ಥಳಿ ಅನಾವರಣ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಐದು ತಿಂಗಳು ಕಳೆದಿದೆ. ಆದರೆ ಅವರ ನೆನಪು ಮಾತ್ರ ಅಜರಾಮರವಾಗಿ ಉಳಿದಿದೆ. ಈಗಾಗಲೇ ಅಭಿಮಾನಿಗಳು ಅಪ್ಪು ನೆನಪಿಗಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ಇನ್ನು ಅಪ್ಪು ಸಮಾಧಿಗೆ ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ಇದೀಗ ನಗರದಲ್ಲಿ ನಗುವಿನ ಒಡೆಯ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಕುಟುಂಬದೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಬಿಬಿಎಂಪಿ ನೌಕರರ ಕನ್ನಡ ಸಂಘ ಅಪ್ಪುಗೆ ಗೌರವ ಸಲ್ಲಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಧಿಕೃತವಾಗಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಬಿಬಿಎಂಪಿ ನೌಕರರ ಕನ್ನಡ ಸಂಘದ ಕಟ್ಟಡದ ಮುಂಭಾಗವೇ ಪುನೀತ್ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುನಿರತ್ನ, ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಹಲವು ಭಾಗಿಯಾಗಿದ್ದರು.
