ಭಜರಂಗದಳ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿದ ರಾಜಕೀಯ ನಾಯಕರು

ಬೆಂಗಳೂರು : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಸಕ ಸಿ ಟಿ ರವಿ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಹತ್ಯೆಯನ್ನು ಖಂಡಿಸಿದ್ದಾರೆ.
ಯಾರೇ ಆದರೂ ಪತ್ತೆ ಹಚ್ಚು ಶಿಕ್ಷೆ ನೀಡಲಿ : ಸಿದ್ದರಾಮಯ್ಯ
ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವವರು. ಯಾರದ್ದೇ ಕೊಲೆಯಾದರೂ ಕಠಿಣ ಶಿಕ್ಷೆಯಾಗಬೇಕು. ಕೊಲೆ ಖಂಡಿಸುತ್ತೇವೆ. ಹರ್ಷ ಎನ್ನುವ ಯುವಕನ ಕೊಲೆಯಾಗಿದೆ. ತಪ್ಪಿತಸ್ತರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಅದೇ ಜಿಲ್ಲೆಯವರು. ಮೊದಲು ಬಂಧಿಸಿ, ತಪ್ಪಿತಸ್ಥರು ಯಾರು ಅಂತ ಮೊದಲು ಪತ್ತೆ ಮಾಡಲಿ. ಕಾಂಗ್ರೆಸ್, ಎಸ್ ಡಿಪಿಐ ಎಂದು ಹೇಳಬಾರದು, ಯಾರೇ ಆದರೂ ಪತ್ತೆ ಹಚ್ಚು ಶಿಕ್ಷೆ ನೀಡಲಿ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ : ಯಡಿಯೂರಪ್ಪ
ಶಿವಮೊಗ್ಗದಲ್ಲಿ 22 ವರ್ಷ ಹರ್ಷ ಎನ್ನುವ ಯುವಕನ ಕೊಲೆ ನಡೆದಿದೆ. ಈ ಘಟನೆ ಖಂಡನೀಯ, ಈ ಬಗ್ಗೆ ಗೃಹ ಸಚಿವರು ಹೇಳಿಕೆಯನ್ನು ಕೊಟ್ಟಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸುತ್ತೇವೆ ಎಂದಿದ್ದಾರೆ. ಈ ಘಟನೆಯನ್ನು ಯಾರೆ ಬಾಗಿಯಾದರು ಅವರನ್ನು ಕೂಡಲೇ ಬಂಧಿಸಬೇಕು. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕೊಲೆಯ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಿ : ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎನ್ನುವುದು ಸರಕಾರಕ್ಕೆ ನನ್ನ ಒತ್ತಾಯ ಎಂದಿದ್ದಾರೆ.
ಶಾಂತಿ ಕದಡಲು ಯತ್ನ ನಡೆಯುತ್ತಿದೆ : ಕಟೀಲ್
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ಖಂಡನೀಯ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲು ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರರಲ್ಲಿ ಮನವಿ ಮಾಡುತ್ತೇನೆ. ಹಿಜಾಬ್ ವಿವಾದದ ನಡುವೆ ಇಂತಹ ಕೃತ್ಯಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನ ನಡೆಯುತ್ತಿದೆ ಎಂದಿದ್ದಾರೆ.
ಸುಳಿವು ಸಿಕ್ಕಿದೆ, ಶೀಘ್ರವೇ ಬಂಧಿಸ್ತೇವೆ : ಆರಗ ಜ್ಞಾನೇಂದ್ರ
ಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿದೆ. ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಗಲಾಟೆಗೂ ಇದಕ್ಕೂ ಸಂಬಂಧ ಇದೆ ಎನಿಸುವುದಿಲ್ಲ. ಐವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಏನು ಮಾಡಿದರೂ ಬಚಾವಾಗುತ್ತೇವೆ ಎಂದುಕೊಂಡವರನ್ನು ಸುಮ್ಮನೆ ಬಿಡುವುದಿಲ್ಲ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ. ನಗರದಲ್ಲಿ ಶಾಂತಿ ಕಾಪಾಡಬೇಕು. ಯಾರೂ ಭಾವುಕರಾಗುವುದು ಬೇಡ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ಹೇಳಿಕೆ ಕಾರಣ : ಈಶ್ವರಪ್ಪ
ಮುಸಲ್ಮಾನ ಗೂಂಡಾಗಳು ನಿನ್ನೆ ರಾತ್ರಿ ನಮ್ಮ ಹಿಂದು ಕಾರ್ಯಕರ್ತನನ್ನ ಹತ್ಯೆ ಮಾಡಿದ್ದಾರೆ. ಇದಕ್ಕೆಲ್ಲ ಡಿ.ಕೆ.ಶಿವಕುಮಾರ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಹತ್ಯೆಯನ್ನು ಖಂಡಿಸುತ್ತದೆ: ಡಿ ಕೆ ಶಿವಕುಮಾರ್
ಈಶ್ವರಪ್ಪರದ್ದು ಹರಕು ಬಾಯಿ ಅಂತಾ ಗೊತ್ತಿದೆ. ಇಂತಹ ಹೇಳಿಕೆ ನೀಡುವ ಈಶ್ವರಪ್ಪ ಮೇಲೆ ಕೇಸ್ ಹಾಕಲಿ. ದೇಶದ್ರೋಹಿ ಹೇಳಿಕೆ ಕೊಟ್ಟ ಅವನ ಮೇಲೆ ಕ್ರಮ ಆಗಬೇಕು ಎಂದು ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹರ್ಷನ ಕೊಲೆ ನಮಗೂ ನೋವಾಗಿದೆ ಇದನ್ನ ನಾನು ನಮ್ಮ ಪಕ್ಷ ಖಂಡಿಸುತ್ತದೆ. ವೈಯಕ್ತಿಕ ವಿಚಾರಕ್ಕೆ ಕೊಲೆ ನಡೆದಿರಬಹುದು ಎನ್ನಲಾಗಿದೆ ದೇಶದ್ರೋಹಿ ಹೇಳಿಕೆ ಕೊಟ್ಟ ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಲಿ ಎಂದು ಆಗ್ರಹಿಸಿದರು.
ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು: ಖಾದರ್ ಒತ್ತಾಯ
ಶಿವಮೊಗ್ಗ ಪ್ರಕರಣ ದುರದೃಷ್ಟಕರ, ಸರ್ಕಾರ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಚಾರ. ರಾಜ್ಯದ ಮಾಜಿ ಸಿಎಂ, ಗೃಹ ಸಚಿವರು, ಹಿರಿಯ ಸಚಿವರರೆಲ್ಲರೂ ಇರುವ ಪ್ರದೇಶದಲ್ಲಿ ಹಾಡುಹಗಲಿನಲ್ಲಿಯೇ ಈ ಘಟನೆ ನಡೆದಿದೆ. ಎಂದರೆ ಈ ಕಿಡಿಗೇಡಿಗಳಿಗೆ ಎಷ್ಟು ಧೈರ್ಯವಿದೆ ಎಂದಿದ್ದಾರೆ.
