ಪೊಲೀಸರ ವಾಹನ ತಪಾಸಣೆ ಕಿರಿಕಿರಿ: ಮಾಜಿ ಸಿಎಂ ಫುಲ್ ಗರಂ

ರಾಮನಗರ: ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ಕಿರಿಕಿರಿ ನೀಡುತ್ತಿರುವ ಪೊಲೀಸರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ತೆರಳುವಾಗ ರಾಮನಗರದ ಎಪಿಎಂಸಿ ಬಳಿ ಸಂಚಾರಿ ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟುತ್ತಿದ್ದನ್ನು ಗಮನಿಸಿ ಸಿಟ್ಟಾದರು. ಕುಮಾರಸ್ವಾಮಿ ಜೊತೆಗಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಸಂಚಾರಿ ಹಾಗು ಸಿವಿಲ್ ಪೊಲೀಸರಿಂದ ವಾಹನ ಸವಾರರಿಗೆ ಆಗುತ್ತಿರುವ ಕಿರುಕುಳವನ್ನು ಮನಮುಟ್ಟುವಂತೆ ಕುಮಾರಸ್ವಾಮಿ ಅವರಿಗೆ ನಿವೇದಿಸಿಕೊಂಡರು.
ಇದರಿಂದ ಮತ್ತಷ್ಟು ಸಿಟ್ಟಾದ ಹೆಚ್ಡಿಕೆ, ಚನ್ನಪಟ್ಟಣದಲ್ಲೂ ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ರೈತರು, ಸಾಮಾನ್ಯ ಜನ ಎಲ್ಲಿಂದ ನಿಮಗೆ ಸಾವಿರ ಐನೂರು ತಂದು ಕೊಡುತ್ತಾರೆ. ಇದು ಹೀಗೆ ಮುಂದೂವರೆದರೇ ಜನರೊಟ್ಟಿಗೆ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ. ಅಲ್ಲದೇ ಸದನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಪೊಲೀಸರ ಮೇಲೆ ಕೆಂಡಮಂಡಲರಾದ ಮೇಲೆ ಜೆಡಿಎಸ್ ಕಾರ್ಯಕರ್ತರು ತಮಗಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ದೂರುಗಳ ಸುರಿಮಳೆಯನ್ನೇಗೈದರು.
