ವಾಹನ ತಪಾಸಣೆ ನೆಪದಲ್ಲಿ ಕಿರಿಕಿರಿ: ಸವಾರರ ಆಕ್ರೋಶ

ರಾಮನಗರ : ಜಿಲ್ಲಾ ಕೇಂದ್ರದಲ್ಲಿನ ಪೊಲೀಸರು ಠಾಣೆಗಳನ್ನು ಬಿಟ್ಟು, ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲಿಯೇ ಹೆಚ್ಚಿನ ಸಮಯ ಕಳೆಯತೊಡಗಿದ್ದಾರೆ. ವಾಹನ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಸಾರ್ವಜನಿಕರಿಗೆ ಪೊಲೀಸರು ಕಿರಾತಕರಾಗಿ ಕಾಡುತ್ತಿದ್ದಾರೆ ಎಂದು ವಾಹನ ಸವಾರರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು–ಮೈಸೂರು ಹೆದ್ದಾರಿಯೇ ಸದ್ಯ ಇಲ್ಲಿನ ಸಂಚಾರ ಪೊಲೀಸರ ಅಡ್ಡೆಯಾಗಿದೆ. ಇವರೊಂದಿಗೆ ಇತರೆ ಠಾಣೆಗಳ ಕೆಲ ಸಿಬ್ಬಂದಿಯೂ ಸೇರಿಕೊಂಡಿದ್ದಾರೆ. ರಾಮನಗರದ ವಡೇರಹಳ್ಳಿ ಗೇಟ್ನಿಂದ ಆರಂಭಗೊಂಡು ಚನ್ನಪಟ್ಟಣದ ಗಡಿ ವೃತ್ತದವರೆಗೆ ನಾಲ್ಕಾರು ಕಡೆಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ತಡೆಯಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಜಿಲ್ಲಾ ಕೇಂದ್ರ ರಾಮನಗರದ ವಡೇರಹಳ್ಳಿ ಗೇಟ್ ಬಳಿ, ಜೈಲು ಮುಂಭಾಗ, ಆಂಜನೇಯ ಆರ್ಚ್ ಬಳಿ, ಪಿಡಬ್ಯುಡಿ ವೃತ್ತ, ರೇಷ್ಮೆ ಮಾರುಕಟ್ಟೆ ಬಳಿ ಸಂಚಾರ ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟುವುದು ಸಾಮಾನ್ಯವಾಗಿದೆ. ಅಲ್ಲಿಂದ ಮುಂದುವರಿದರೆ ಎಪಿಎಂಸಿ, ಕನಕಪುರ ವೃತ್ತ, ಜಿಲ್ಲಾಧಿಕಾರಿ ನಿವಾಸದ ಮುಂಭಾಗ, ಕೆಂಗಲ್ ಹಾಗೂ ಚನ್ನಪಟ್ಟಣದ ಶೇರ್ವ ವೃತ್ತ, ಸಾತನೂರು ವೃತ್ತ, ಬಸ್ ನಿಲ್ದಾಣ ಬಳಿಯೂ ಪೊಲೀಸರ ಮುಂದೆ ವಾಹನ ಸವಾರರು ಕೈ ಕಟ್ಟಿ ನಿಲ್ಲಬೇಕಿದೆ. ಪ್ರತಿ ತಪಾಸಣೆ ಸಂದರ್ಭವೂ ಮೂರ್ನಾಲ್ಕು ನಿಮಿಷದಂತೆ ಲೆಕ್ಕ ಹಾಕಿದರೂ ಅರ್ಧ ಗಂಟೆಗೂ ಹೆಚ್ಚು ಕಾಲ ಇಲ್ಲಿಯೇ ಸಮಯ ವ್ಯರ್ಥವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಇನ್ನು ಗ್ರಾಮೀಣ ಜನರು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಬಳಿ ದಾಖಲೆಗಳನ್ನು ಇಟ್ಟುಕೊಂಡಿರುವುದಿಲ್ಲ. ಇದನ್ನೇ ಕೆಲವು ಪೊಲೀಸರು ಬಂಡವಾಳ ಮಾಡಿಕೊಂಡಿದ್ದಾರೆ. ವಾಹನದ ಆರ್.ಸಿ, ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ತೋರಿಸಿದರೂ ಇನ್ನೂ ಕೆಲವು ದಾಖಲೆಗಳಿಗೆ ಒತ್ತಾಯ ಮಾಡಲಾಗುತ್ತಿದೆ. ಕಡೆಗೆ ಇಂತಿಷ್ಟು ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ನೀಡದಿದ್ದ ಸಂದರ್ಭ 500–1000 ರೂ. ದಂಡದ ರಸೀತಿ ಕೈಗಿಡುತ್ತಾರೆ. ಪ್ರಶ್ನಿಸಿದರೆ ಕೋರ್ಟ್ಗೆ ಹೋಗಿ ಹಣ ಕಟ್ಟುವಂತೆ ತಾಕೀತು ಮಾಡುತ್ತಾರೆ’ ಎಂದು ನೊಂದ ಸಾರ್ವಜನಿಕರು ರಾಮನಗರ ಜಿಲ್ಲಾ ಪೊಲೀಸ್ ವ್ಯವಸ್ಥೆಯ ವಿರುದ್ಧ ದೂರುತ್ತಿದ್ದಾರೆ.
ಇನ್ನು ಕನಕಪುರ, ಮಾಗಡಿ ಚನ್ನಪಟ್ಟಣ ತಾಲೂಕಿನ ನಾನಾ ಭಾಗಗಳಲ್ಲೂ ಪೊಲೀಸರ ಕಿರಿಕಿರಿ ತಪ್ಪುತ್ತಿಲ್ಲ. ಎಲ್ಲೆಂದರಲ್ಲಿ ಅಡ್ಡ ಹಾಕುವುದೇ ನಿತ್ಯದ ಕೆಲಸವಾಗಿದೆ. ನಮಗೆ ಮೇಲಿನಿಂದ ನಿರ್ಧಿಷ್ಟ ಗುರಿ ಇದೆ. ಏನು ಮಾಡಲಿಕ್ಕೆ ಆಗೋಲ್ಲ ಅಂತ ಪೊಲೀಸ್ ಸಿಬ್ಬಂದಿ ಹೇಳುತ್ತಾರೆ. ಆದರೇ ಮನೆಗಳವು, ಗಾಂಜಾ ಮಾರಾಟ, ಜೂಜು ಅಡ್ಡೆ ಹೀಗೆ ಹತ್ತಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಗುರಿ ನಿಗದಿ ಮಾಡಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ, ಜನಪ್ರತಿನಿಧಿಗಳು ಇತ್ತ ಗಮನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
