ಕಲಬುರಗಿ ಜಿಲ್ಲೆಗೆ ಮೋದಿ ಭೇಟಿ ಸಾಧ್ಯತೆ

ಕಲಬುರಗಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಗ್ರಾಮ ಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಏಪ್ರಿಲ್ 24 ರಂದು ಶಿವಮೊಗ್ಗ, ವಿಜಯ ನಗರ ಅಥವಾ ಕಲಬುರಗಿ ಜಿಲ್ಲೆಗಳ ಪೈಕಿ ಯಾವುದಾದರು ಒಂದು ಜಿಲ್ಲೆಯನ್ನು ಪ್ರವಾಸಕ್ಕೆ ಮೋದಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಕಲಬುರಗಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಭೀಮಳ್ಳಿ ಗ್ರಾಮಕ್ಕೆ ಪ್ರಧಾನ ಮಂತ್ರಿಗಳು ಭೇಟಿ ನೀಡಲಿದ್ದಾರೆ. ಏ.24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಪ್ರಧಾನ ಮಂತ್ರಿಗಳು ಭೀಮಳ್ಳಿಯಿಂದ ವರ್ಚುವಲ್ ಮೂಲಕ ದೇಶದ 2.50 ಲಕ್ಷ ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳನ್ನು ಸಂಬೋಧಿಸಿ ಮಾತನಾಡಲಿದ್ದಾರೆ. ಜೊತೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೂ ಸಂವಾದ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮಾರ್ಚ್ 8 ಅಥವಾ 9 ರಂದು ಪ್ರಧಾನ ಮಂತ್ರಿಗಳ ಭದ್ರತಾ ತಂಡ ಜಿಲ್ಲೆಗೆ ಆಗಮಿಸಿ ಭದ್ರತೆಯನ್ನ ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
