Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ಯಾರಿಗೇಳೋಣ ನಮ್ಮ ಪ್ರಾಬ್ಲಂ: ಯೋಧರ ಗ್ರಾಮದ ಗೋಳು ಕೇಳೋರ್ಯಾರು?

ದಾವಣಗೆರೆ: ಅದು ದೇಶಕ್ಕೆ ಯೋಧರನ್ನು ಕೊಟ್ಟಿರುವ ಗ್ರಾಮ. ಇಲ್ಲಿಂದ ನೂರಾರು ಯುವಕರು ಸೇನೆಗೆ ಸೇರಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಸಲ್ಲಿಸುತ್ತಲೇ ಇದ್ದಾರೆ. ಆದ್ರೆ ಇವರ ನಿತ್ಯದ ಗೋಳು ಹೇಳತೀರದಾಗಿದೆ. ಹೌದು ಇಂಥ ಸಮಸ್ಯೆ ಎದುರಿಸ್ತಿರೋದು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಜನರು.

ಅವೈಜ್ಞಾನಿಕ ರೈಲ್ವೆ ಬ್ರಿಡ್ಜ್ ನಿರ್ಮಾಣದಿಂದ ತೋಳಹುಣಸೆ ಗ್ರಾಮದ ಜನರು, ವಿದ್ಯಾರ್ಥಿಗಳು ಪರದಾಡುತ್ತಿರುವ ಪರಿಪಾಟಲು ಒಂದೆರಡಲ್ಲ‌. ಬ್ರಿಡ್ಜ್ ಹತ್ತಿಳಿಯಲು ಮೆಟ್ಟಿಲುಗಳ ನಿರ್ಮಾಣ, ರೈಲ್ವೆ ಹಳಿ ದಾಟಲು ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಕಿಲೋ ಮೀಟರ್ ಉದ್ದದ ಅವೈಜ್ಞಾನಿಕ ಬ್ರಿಡ್ಜ್ ನಿರ್ಮಾಣ ಮಾಡಿರುವುದರಿಂದ ಸಮಸ್ಯೆ ಆಗುತ್ತಿದೆ ಎಂಬುದು ಜನರ ಆರೋಪ.‌

ಮೂರು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಸಾವಿರಾರು ಜನರು ಪ್ರತಿನಿತ್ಯ ರೈಲ್ವೆ ಹಳಿ ದಾಟಲು, ಬ್ರಿಡ್ಜ್ ಹತ್ತಲು ಹಾಗೂ ಇಳಿಯಲು ಮೆಟ್ಟಿಲುಗಳಿಲ್ಲದೆ ಕಿಲೋ ಮಿಟರ್ ಗಟ್ಟಲೆ ಸುತ್ತುವ ದುಃಸ್ತಿತಿ ಎದುರಾಗಿದೆ. ಬ್ರಿಡ್ಜ್ ನಿರ್ಮಾಣವಾದ್ರೂ ಸರ್ಕಾರದ ಬೊಕ್ಕಸದಿಂದ ಹಣ ಖಾಲಿ ಮಾಡಿದ್ದೇ ಸಾರ್ಥಕವಾಗಿದೆಯೇ ವಿನಃ ಒಂದು ಸಮರ್ಪಕ ಸಾರ್ವಜನಿಕ ಸ್ನೇಹಿ ಬ್ರಿಡ್ಜ್ ಆಗಲೇ ಇಲ್ಲ. ಜನರು ಆತಂಕ ಪಡುವಂತ ಬ್ರಿಡ್ಜ್ ನಿರ್ಮಾಣ ಮಾಡಿ ಖಾಸಗಿ ಸಂಸ್ಥೆ ತನ್ನ ಪಾಲಿನ ಬಿಲ್ ಮಾಡಿಸಿಕೊಂಡು ಗಂಟು ಮೂಟೆ ಕಟ್ಟಿಕೊಂಡು ಹೋಗಿದ್ದು ಈಗ ಇತಿಹಾಸ.

ಬ್ರಿಡ್ಜ್ ನಿಂದ ಗ್ರಾಮಸ್ಥರ ಗೋಳು ಹೇಳತೀರದು. ‌ಶಾಲಾ ಮಕ್ಕಳು ವೃದ್ಧರಂತೂ ಜೀವ ಬಿಗಿ ಹಿಡಿದು ರೈಲ್ವೆ ಹಳಿಗಳನ್ನು ದಾಟುವ ಪರಿಸ್ಥಿತಿ ಇದೆ. ರೈತರು, ಕೂಲಿ ಕಾರ್ಮಿಕರು, ಸಾರ್ವಜನಿಕರು ರೈಲ್ವೆ ಬಳಿಯ ಒಂದು ಬದಿಯಿಂದ ಇನ್ನೊಂದು ಬದಿ ದಾಟಲು ಅಂದರೆ ಕೇವಲ 10 ಅಡಿ ರೈಲ್ವೆ ಹಳಿ ದಾಟಲು ಬರೊಬ್ಬರಿ 1.4 ಕಿಲೋಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಬ್ರಿಡ್ಜ್ ನಿರ್ಮಾಣ ಮಾಡಿದ ಸಂಸ್ಥೆ ಬ್ರಿಡ್ಜ್ ಹತ್ತಲು ಇಳಿಯಲು ಯಾವುದೇ ಮೆಟ್ಟಿಲಿನ ವ್ಯವಸ್ಥೆ ಮಾಡದೇ ಗ್ರಾಮಸ್ಥರಿಗೆ ತೀವ್ರ ತೊಂದರೆ ಆಗುವಂತೆ ಮಾಡಿದೆ. ಇಲ್ಲಿನ ಬಹುತೇಕ ರೈತರು ಮನೆಯಿಂದ ತಮ್ಮ ತಮ್ಮ ಹೊಲ ಗದ್ದೆಗಳಿಗೆ ಹೋಗಲು, ಶಾಲಾ ಮಕ್ಕಳು ಶಾಲೆಗೆ ತೆರಳಲು, ವ್ಯಾಪಾರಿಗಳು ನಗರಕ್ಕೆ ಬರಲು ಬಸ್ ಹತ್ತಲು ಎರಡು ಕಿಲೋಮೀಟರ್ ನಡೆದು ಹೋಗಲು ಕಷ್ಟಪಡಬೇಕಿದೆ.

ರೈಲ್ವೆ ಅಧಿಕಾರಿಗಳು, ಜನ ಪ್ರತಿಪ್ರತಿನಿಧಿಗಳಿಗೆ ಈ ಬಗ್ಗೆ ದೂರು ಕೊಟ್ಟು ಗಮನ ಸೆಳೆಯಲಾಗಿದೆ. ಆದರೂ ಕ್ರಮ ತೆಗೆದುಕೊಂಡಿಲ್ಲ. ರೈಲ್ವೆ ಹಳಿ ದಾಟುವಾಗ ಏನಾದರೂ ಅನಾಹುತವಾದರೆ ಯಾರು ಹೊಣೆ? ಇದಕ್ಕೆ ಆಸ್ಪದ ನೀಡಬೇಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button