ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯವೇ ಹೊರತು ಬೇರೇನೂ ಅಲ್ಲ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಹೊರತುಪಡಿಸಿ ಕೇಸರಿ ರುಮಾಲನ್ನಾಗಲಿ, ಹಿಜಾಬ್ ಆಗಲಿ ಧರಿಸಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ಮತ್ತಿತರ ಶಾಲೆಗಳಲ್ಲಿ ಹಿಜಾಬ್ ಮತ್ತು ಕೇಸರಿ ರುಮಾಲು ವಿವಾದ ಭುಗಿಲೆದ್ದ ಬೆನ್ನಲ್ಲೇ ಗೃಹ ಸಚಿವರು ನೀಡಿರುವ ಈ ಹೇಳಿಕೆ ಗಮನ ಸೆಳೆದಿದೆ.
ವಿಧಾನಸೌಧದ ಮುಂಭಾಗ ರಾಜ್ಯ ವಿಪತ್ತು ಸ್ಪಂದನಾಪಡೆಯ ನೂತನ ವಾಹನಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವವಿರಬೇಕು. ಸಮವಸ್ತ್ರವೇ ಕಡ್ಡಾಯವೇ ಹೊರತು ಬೇರೇನೂ ಅಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ಒಂದೇ ಎಂಬ ಭಾವನೆ, ಭಾರತ ಮಾತೆಯ ಮಕ್ಕಳು ಎಂಬ ರಾಷ್ಟ್ರಪ್ರೇಮ ಇರಬೇಕು ಎಂದರು.
ಪೂಜೆ, ಧಾರ್ಮಿಕ ಕಾರ್ಯಗಳು ದೇವಾಲಯ, ಮಸೀದಿಗಳಲ್ಲಿರಲಿ. ಶಾಲೆಗಳಲ್ಲಿ ದೇಶದ ಏಕತೆ, ಸಮಗ್ರತೆ ಬಗ್ಗೆ ಸಂಸ್ಕಾರ ಇರಬೇಕು ಎಂದೂ ಸಚಿವರು ಹೇಳಿದರು. ಮತೀಯ ಸಂಘಟನೆಗಳ ಬಗ್ಗೆ ಗಮನ ಹರಿಸಲು ಪೊಲೀಸರಿಗೆ ಸೂಚಿಸಲಾಗಿದ್ದು,ಏಕತೆಗೆ ಅಡ್ಡಗಾಲು ಹಾಕುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನೇತಾಜಿ ಹೆಸರಲ್ಲಿ ತರಬೇತಿ ಸಂಸ್ಥೆ
ಇದಕ್ಕೂ ಮುನ್ನ ವಿಪತ್ತು ಸ್ಪಂದನಾ ಪಡೆಯ ಆ್ಯಂಬುಲೆನ್ಸ್, ಜೀಪು, ಸರಕು ಸಾಗಾಣಿಕೆಯ ವಾಹನ, ಜನರೇಟರ್ ಒಳಗೊಂಡ ಟ್ರಕ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ವಿಪತ್ತು ಸ್ಪಂದನಾ ಪಡೆ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ವಾರದ ಎಲ್ಲಾ ದಿನವೂ 24 ಗಂಟೆಯೂ ಸಹಾಯಕ್ಕಾಗಿ ಧಾವಿಸಲು ಸ್ಪಂದನಾ ಪಡೆಗೆ 20 ಕೋಟಿ ರೂ. ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಇನ್ನೂ ಮೂರು ರಾಜ್ಯ ವಿಪತ್ತು ಸ್ಪಂದನಾ ಪಡೆ ಕಂಪೆನಿಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದರು.
ಮೊದಲ ಹಂತದಲ್ಲಿ ಶೋಧನಾ ಮತ್ತು ರಕ್ಷಣಾ ಉಪಕರಣ ಖರೀದಿಗೆ 9.65 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕಠಿಣ ಪರಿಶ್ರಮ, ಬದ್ಧತೆ, ಮುಂದಾಲೋಚನೆಯಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ, ರಾಷ್ಟ್ರದಲ್ಲೇ ಅತ್ಯುತ್ತಮ ಮಾದರಿ ತುರ್ತು ಪಡೆಯಾಗಿ ಹೊರ ಹೊಮ್ಮಬೇಕೆಂದು ಸಚಿವರು ಆಶಿಸಿದರು.
ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕೇಂದ್ರೀಯ ತರಬೇತಿ ಅಕಾಡೆಮಿ ದೊಡ್ಡಬಳ್ಳಾಪುರದಲ್ಲಿರುವ ಅಗ್ನಿಶಾಮಕ ಪಡೆಯ 20 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ನೇತಾಜಿ ಅವರ 125ನೇ ಜಯಂತಿ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಅವರ ಆದರ್ಶಗಳನ್ನು ನೆನಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಅವಘಡ ನಿರ್ವಹಿಸಲು ವಿಶೇಷ ಕಾರ್ಯಪಡೆಯ ಅಗತ್ಯವಿದೆ. ಸಿಬ್ಬಂದಿ ಕೊರತೆ ನೀಗಿಸಲು ನಿಯೋಜನೆ ಮೇಲೆ ಸಿಬ್ಬಂದಿ ಒದಗಿಸಲು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದೂ ಸಚಿವರು ತಿಳಿಸಿದರು.
