ತಂದೆ ಯಾರೆಂಬುದು ತಂದೆಯಾದವನಿಗೆ ಗೊತ್ತಿರುತ್ತದೆ; ಸಂಸದೆ ನುಸ್ರತ್ ಖಡಕ್ ಉತ್ತರ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್, ಕಳೆದ ತಿಂಗಳು ಮಗುವಿಗೆ ಜನ್ಮ ನೀಡಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮಗುವಿನ ತಂದೆಯ ಕುರಿತು ಎದುರಾದ ಪ್ರಶ್ನೆಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ತಂದೆ ಯಾರೆಂಬುದು ತಂದೆಯಾದವನಿಗೆ ಗೊತ್ತಿರುತ್ತದೆ ಎನ್ನುವ ಮೂಲಕ, ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೆಕಿಲ್ಲ ಎನ್ನುವಂತೆ ಉತ್ತರಿಸಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಸಂಸತ್ತಿಗೆ ಮರಳುವುದಾಗಿ ಘೋಷಿಸಿದ ನಟಿ-ಸಂಸದೆ ನುಸ್ರತ್, ಪ್ರಶ್ನೆಗಳನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿದರು.
ನಾನೀಗ ತಾಯಿಯಾಗಿ ಮಗುವನ್ನು ನೋಡಿಕೊಳ್ಳಬೇಕು. ಹಾಗೇಯೇ ನನ್ನನ್ನು ಆರಿಸಿ ಕಳಿಸಿದ ಜನರಿಗೂ ನಾನು ಜವಾಬ್ದಾರಳು. ನನ್ನ ಜವಾಬ್ದಾರಿ ನಿರ್ವಹಿಸುವೆ. ಮುಂಗಾರು ಅಧಿವೇಶನಕ್ಕೆ ಹಾಜರಾಗಲು ಆಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಖಂಡಿತಾ ಸಂಸತ್ತಿನಲ್ಲಿರುವೆ ಎಂದರು.
ಮಗುವಿನ ತಾಯಿಯಾದ ಬಳಿಕ ಎಲ್ಲವೂ ಬದಲಾಗಿದೆ. ಭೂಗೋಳದಿಂದ ಇತಿಹಾಸದವರೆಗೆ ಎಲ್ಲವೂ ಬದಲಾಗಿದೆ ಎಂದು ನುಸ್ರತ್ ಪ್ರತಿಕ್ರಿಯಿಸಿದರು.
ಉದ್ಯಮಿ ನಿಖಿಲ್ ಜೈನ್ ಜೊತೆಗಿನ ವೈವಾಹಿಕ ಸಂಬಂಧ 2020ರಲ್ಲಿ ಕೊನೆಗೊಂಡ ಬಳಿಕ ನಟ ಯಶ್ ದಾಸ್ಗುಪ್ತಾ ಜೊತೆಗೆ ಇರುವ ನುಸ್ರತ್ ಜಹಾನ್ ಆಗಸ್ಟ್ 26ರಂದು ಮಗ ಇಶಾನ್ಗೆ ಜನ್ಮ ನೀಡಿದ್ದಾರೆ. ನಾನು ಮತ್ತು ಯಶ್ ಮಗುವಿನ ಜೊತೆ ಚೆನ್ನಾಗಿದ್ದೇವೆ ಎಂದು ನುಸ್ರತ್ ಹೇಳಿಕೊಂಡಿದ್ದಾರೆ.
