ನೀಟ್ ಪಿಜಿ: ಮೀಸಲಾತಿ ಕೇಂದ್ರದ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್

ನವದೆಹಲಿ: ವೈದ್ಯಕೀಯ ಕೋರ್ಸ್ ಗಳ ಪಿಜಿ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಓಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನೀಡುವ ಕೇಂದ್ರದ ಕೋಟಾ ಮೀಸಲು ಕ್ರಮವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಓಬಿಸಿ ವರ್ಗಕ್ಕೆ ಶೇಕಡ 27 ಮತ್ತು ಇಡಬ್ಲ್ಯುಎಸ್ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ರ ಮೀಸಲಾತಿ ನೀಡುವ ಕೇಂದ್ರದ ಕ್ರಮವನ್ನು ನ್ಯಾಯಾಲಯ ಸಮ್ಮತಿಸಿದೆ.
ಜೊತೆಗೆ ಅಸ್ತಿತ್ವದಲ್ಲಿರುವ ಓಬಿಸಿ ಮತ್ತು ಡಬ್ಲ್ಯುಎಸ್ ಮೀಸಲು ಪ್ರಮಾಣದ ಆಧಾರದಲ್ಲಿ20 21 – 22 ನೇ ಸಾಲಿನ ನೀಟ್ ಪಿಜಿ ಕೌನ್ಸಿಲಿಂಗ್ ನಡೆಸಲು ನ್ಯಾಯಾಲಯ ಸಮ್ಮತಿ ನೀಡಿದೆ. ಅರ್ಜಿದಾರರು ಕೇಂದ್ರ ಸರ್ಕಾರ ಓಬಿಸಿ ಮೀಸಲಾತಿ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕೇಂದ್ರದ ಕ್ರಮ ಅಸಂವಿಧಾನಿಕ ಎಂದು ಅರ್ಜಿಯಲ್ಲಿ ಹೇಳಿದ್ದರು.
ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿ, ಅರ್ಜಿದಾರರ ಮನವಿ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ವಾದ ಮಂಡಿಸಿದ್ದರು .
