ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು ಕೊಲೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ ದಂಡ!

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿಗಳಿಗೆ ಹುಬ್ಬಳ್ಳಿಯ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದೂವರೆ ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಪಠಾಣ ಗಲ್ಲಿಯ ಸರ್ಕಲ್ ಬಳಿ ಶಾಬುದ್ದಿನ್ ಎಂಬಾತನನ್ನು ಶಂಶುದ್ದಿನ್ ಸವಣೂರು, ಜುಬೇರ್ ಅಹ್ಮದ್ ಕಲಬುರ್ಗಿ ಎಂಬುವವರು ಚಾಕುವಿನಿಂದ ಹೊಟ್ಟೆ, ಬೆನ್ನಿಗೆ ಹಾಗೂ ಇರಿದು ಕೊಲೆ ಮಾಡಿದ್ದರು.
ಇಷ್ಟಕ್ಕೂ ಆ ದಿನ ಏನಾಗಿತ್ತು ಗೊತ್ತಾ?
2020 ಮಾರ್ಚ್ 10 ರಂದು ರಾತ್ರಿ 11:45 ರ ಸುಮಾರಿಗೆ ಕಟಗರ ಓಣಿಯ ಸರಕಾರಿ ಉರ್ದು ಶಾಲೆಯ ಹತ್ತಿರ ಆರೋಪಿಗಳಾದ ಶಂಶುದ್ದಿನ್ ಸವಣೂರು, ಜುಬೇರ್ ಅಹ್ಮದ್ ಕಲಬುರ್ಗಿ ಮಾತನಾಡುತ್ತಾ ಕುಳಿತ್ತಿದ್ದ ಸಂದರ್ಭದಲ್ಲಿ ಶಾಬುದ್ದಿನ್ ಬಂದು ಗುರಾಯಿಸಿ ನೋಡಿದಕ್ಕೆ ಶಂಶುದ್ದಿನ್ ಸವಣೂರು ಯಾಕೆ ಗುರಾಯಿಸಿವೆ ಎಂದು ಪ್ರಶ್ನೆ ಮಾಡಿದ್ದಾನೆ. ಇದೇ ಕಾರಣಕ್ಕೆ ಶಾಬುದ್ದಿನ ತನ್ನ ಕೈಯಲ್ಲಿದ್ದ ಕಡಗದಿಂದ ಹೊಡೆಯಲು ಹೋದಾಗ ಸ್ಥಳೀಯರು ಜಗಳ ಬಿಡಿಸಿ ಕಳಿಸಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳು ದ್ವೇಷದಿಂದ ಮಾ.11 2020 ರಂದು ಪಠಾಣಗಲ್ಲಿಯ ಸರ್ಕಲ್ ನಲ್ಲಿ ಶಾಬುದ್ದಿನ್ ಬರುವುದನ್ನು ಕಾದು ಆತನ ಜೊತೆಗೆ ಜಗಳ ತೆಗೆದು ಆತನಿಗೆ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕ ಗಾಯಗೊಳಿಸಿ ಬರ್ಬರವಾಗಿ ಕೊಲೆ ಮಾಡಿದರು.
ಈ ಕುರಿತು ಮೃತನ ತಂದೆ ನೀಡಿದ ದೂರಿನ ಅನ್ವಯ ತನಿಖಾಧಿಕಾರಿ ಶ್ಯಾಮರಾವ್ ಸಜ್ಜನ್ ತನಿಖೆ ನಡೆಸಿ, ಆರೋಪಿಗಳನ್ನ ಬಂಧಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ಕುರಿತು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ್ ಕೆ.ಎನ್ ರವರು 2022ರ ಮಾ.28 ರಂದು ಜೀವಾವಧಿ ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂ ದಂಡ, ದಂಡವನ್ನು ಕಟ್ಟದಿದ್ದರೆ ಹೆಚ್ಚುವರಿಯಾಗಿ 2 ವರ್ಷ ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ 1,45,000 ರೂ. ಗಳನ್ನು ಅವಲಂಬಿತರಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿರುತ್ತಾರೆ. ಸರ್ಕಾರಿ ವಕೀಲ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.
