ಮೋದಿ ಸರ್ಕಾರ ದೇಶದಲ್ಲಿ ಕಣ್ಗಾವಲು ಪರಿಸ್ಥಿತಿ ನಿರ್ಮಾಣ ಮಾಡಿದೆ: ಮಮತಾ ಬ್ಯಾನರ್ಜಿ

ಕೋಲ್ಕತಾ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸುತ್ತಿಲ್ಲ. ಅದು ದೇಶದಲ್ಲಿನ ನಾಗರಿಕರ ಮೇಲೆ ಗೂಢಚರ್ಯೆ ನಡೆಸುತ್ತಿದೆ ಇಡೀ ದೇಶದಲ್ಲಿ ಕಣ್ಗಾವಲು ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಬಿಜೆಪಿಯನ್ನು ಅಧಿಕಾರದಿಂದ ಇಳಿಸಬೇಕಿದೆ ಅದಕ್ಕಾಗಿ ಬಿಜೆಪಿ ವಿರೋಧಿಗಳೆಲ್ಲ ಒಂದಾಗಿ ಹೋರಾಡಬೇಕಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪೆಗಾಸಸ್ ಕಣ್ಗಾವಲು ವಿಷಯದ ಕುರಿತಂತೆ ಕೋಲ್ಕತ್ತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ನ ರ‍್ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಪ್ರತಿಪಕ್ಷ ನಾಯಕರು, ಸಚಿವರು, ನ್ಯಾಯಾಧೀಶರು ಮತ್ತು ಅಧಿಕಾರಿಗಳ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳು ಒಂದಾಗಿ ಬಿಜೆಪಿ ವಿರೋಧಿ ರಂಗವನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ರಂಗ ಸ್ಥಾಪಿಸಬೇಕೆಂದು ನಾನು ಒತ್ತಾಯಿಸುತ್ತೇನೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟಕ್ಕೆ ಇಳಿಯಬೆಕು ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಇದು ಸರಿಯಾದ ಸಮಯ ಎಂದರು.
ನಮ್ಮೆಲ್ಲರ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಅರಿವಾಗಿದೆ. ಬಿಜೆಪಿ ದೇಶದಾದ್ಯಂತ ಬೇಹುಗಾರಿಕೆ ನಡೆಸುತ್ತಿದೆ. ತನ್ನ ಫೋನ್ ಟ್ಯಾಪ್ ಆಗುತ್ತಿರುವುದರಿಂದ ನನಗೆ ಯಾವುದೇ ಪ್ರತಿಪಕ್ಷದ ನಾಯಕರಿಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಆಯೋಜಿಸಿದ್ದ ರ‍್ಯಾಲಿಯಲ್ಲಿ ಕಾಂಗ್ರೆಸ್, ಎಸ್‌ಪಿ, ಎನ್‌ಸಿಪಿ, ಶಿವಸೇನೆ ಮತ್ತು ಇತರ ಹಲವಾರು ಪಕ್ಷಗಳ ನಾಯಕರು ಪಾಲ್ಗೊಂಡಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಲ್ಲರಿಗೂ ಧನ್ಯವಾದ ಹೇಳಿದರು.
