ರೈತರಿಗೆ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಚಿಕ್ಕಮಗಳೂರು: ಕೋವಿಡ್ ಮಹಾಮಾರಿ ಹೊಡೆತಕ್ಕೆ ಜಿಲ್ಲೆಯ ಮಲೆನಾಡು ಭಾಗದ ರೈತರ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದ್ದು, ಸಂಕಷ್ಟದಲ್ಲಿರುವ ಕಾಫಿ, ಅಡಕೆ, ಮೆಣಸು ಬೆಳೆಗಾರರು ಹಾಗೂ ಭತ್ತ ಬೆಳೆಯುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಜಿಲ್ಲೆಯ ನಿಯೋಗವೊಂದು ಕೇಂದ್ರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯಲ್ಲಿ ಭೇಟಿ ನೀಡಿ ಮನವಿ ಸಲ್ಲಿಸಿದೆ.
ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕಾಫಿ ಬೆಳೆಗೆ ಸಂಬಂಧಿಸಿದಂತೆ ಸರ್ಫೆಸಿ ಕಾಯ್ದೆ ವಾಪಸ್ ಪಡೆಯಬೇಕು. ಮಲೆನಾಡು ಭಾಗದಲ್ಲಿ ಬೆಳೆಯುವ ಮುಖ್ಯ ಬೆಳೆಗಳಾದ ಅಡಕೆ, ಮೆಣಸು ಬೆಳೆಗಳು ಉತ್ತಮ ಬೆಲೆ ಲಭ್ಯವಾಗಬೇಕು. ಇವುಗಳು ಹೊರಗಿನಿಂದ ಅಕ್ರಮವಾಗಿ ಭಾರತದ ಮಾರುಕಟ್ಟೆ ಪ್ರವೇಶಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ರೈತರು ಸರ್ಕಾರಿ ಸೌಲಭ್ಯ ಪಡೆಯಲು ರೈತರು ಪದೇಪದೇ ಕಚೇರಿಗಳ ಮುಂದೆ ಸರತಿ ಸಾಲಲ್ಲಿ ನಿಂತುಕೊಳ್ಳುವಂತಾಗಬಾರದು. ದಾಖಲೆ ನೀಡುವ ಬದಲಾಗಿ ಸರ್ಕಾರದ ಬಳಿಯಲ್ಲೇ ಇರುವ ದಾಖಲೆ ಪರಿಗಣಿಸಿ ಏಕಗವಾಕ್ಷಿ ಪದ್ಧತಿ ತಂದು ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು, ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರಗಿಡಬೇಕು, ಸಂಕಷ್ಟದಲ್ಲಿರುವ ಜಿಲ್ಲೆಯ ರೈತಾಪಿ ವರ್ಗಕ್ಕೆ ವಿವಿಧ ಯೋಜನೆಗಳಡಿ ವಿಶೇಷ ಅನುದಾನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಿ.ಎಂ.ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ದೀಪಕ್ ದೊಡ್ಡಯ್ಯ, ಆಲ್ದೂರು ಸುದರ್ಶನ್, ದಿನೇಶ್ ಮುಗುಳುವಳ್ಳಿ ಇದ್ದರು.
