ಬಿಜೆಪಿಯಲ್ಲಿ ಬಿಎಸ್ವೈ ಮಂತ್ರಿನೂ ಆಗಿರಲಿಲ್ಲ, ನಾನು ಆಗಲೇ ಕೇಂದ್ರ ಸಚಿವನಾಗಿದ್ದೆ: ಶಾಸಕ ಯತ್ನಾಳ್

ಮೈಸೂರು: ನಾನು ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು. ನಾನೇ ಕೆಲವು ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ, ನಾನು ಆಗಲೇ ಕೇಂದ್ರ ಸಚಿವನಾಗಿದ್ದೆ ಎಂದು ಮುಖ್ಯಮಂತ್ರಿ ಬಿಎಸ್ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾನಂದಗೌಡ, ಜಗದೀಶ್ ಶೆಟ್ಟರ್ಗಿಂದ ನಾನು ಹಿರಿಯ. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ, ಆಗಲೇ ಕೇಂದ್ರ ಸಚಿವನಾಗಿದ್ದೆ. ನನ್ನ ರಾಜಕೀಯ ಜೀವನ ಅಂತ್ಯವಾದರೂ ಪರವಾಗಿಲ್ಲ. ಭ್ರಷ್ಟಾಚಾರ, ಕುಟುಂಬಶಾಹಿ ವಿರುದ್ಧ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ. ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ನಮ್ಮ ಬಳಿ ಇದೆ. ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಪಕ್ಷದ ಹಿತದೃಷ್ಟಿಯಿಂದ ಹಾಗೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ನಿವೃತ್ತಿ ಒಳ್ಳೆಯದು ಎಂದು ತಿಳಿಸಿದರು.
ನಾನು ಏಕಾಂಗಿಯಲ್ಲ, ಸಾಕಷ್ಟು ಸಚಿವರು ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟವನ್ನು ಮುಂದುವರಿಸಿ ಎಂದು ಅವರು ನನಗೆ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ನನ್ನ ಹೋರಾಟದ ಫಲ ಸಿಗುತ್ತದೆ ಎಂದರು.
ಯತ್ನಾಳ್ ರಾಜೀನಾಮೆ ನೀಡಿ ಹೊರಬರಲಿ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ವಿಜಯೇಂದ್ರ ಜೊತೆ ಹೊಂದಿಕೊಂಡಿದ್ದಾರೆ. ಪರಸ್ಪರ ಭೇಟಿಯಾಗಿ ಸಲಹೆ ಕೊಡುತ್ತಾರೆ ಎಂದು ಟೀಕಿಸಿದರು.
