Breaking NewsLatestರಾಜಕೀಯರಾಷ್ಟ್ರೀಯ

ನನ್ನ ಸಂಪುಟದ ಮಂತ್ರಿಗಳಿಗೆ ಹಿಂದಿ ಬರುವುದಿಲ್ಲ; ಅಮಿತ್ ಶಾಗೆ ಮಿಜೋರಾಂ ಸಿಎಂ ಪತ್ರ

ಗುವಾಹಟಿ: ನನ್ನ ಸಂಪುಟದಲ್ಲಿರುವ ಮಂತ್ರಿಗಳಿಗೆ ಹಿಂದಿ ಭಾಷೆ ಬರುವುದಿಲ್ಲ. ಕೆಲವರಿಗೆ ಇಂಗ್ಲಿಷ್ ಕೂಡ ಗೊತ್ತಿಲ್ಲ. ಈಗ ನೇಮಕಗೊಂಡಿರುವ ಮುಖ್ಯ ಕಾರ್ಯದರ್ಶಿಗೆ ಮಿಜೋ ಭಾಷೆ ಬರುತ್ತಿಲ್ಲ. ಹಗಾಗಿ ಅವರನ್ನು ಬದಲಿಸುವಂತೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರಿಗೆ ಮಿಜೋರಾಂ ಮುಖ್ಯಮಂತ್ರಿ ಪು ಜೊರಾಮ್​ಥಂಗಾ ಆಗ್ರಹಿಸಿದ್ದಾರೆ.

ಕೇಂದ್ರ ಗೃಹ ಸಚಿವರಿಗೆ ಪತ್ರದ ಮೂಲಕ ಈ ಆಗ್ರಹ ಮಾಡಿರುವ ಅವರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆಸಿ ರಾಮ್​ಥಂಘಾ ಅವರನ್ನೇ ರೇಣು ಶರ್ಮಾ ಬದಲಿಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸುವಂತೆ ವಿನಂತಿಸಿದ್ದಾರೆ.

ಮುಖ್ಯ ಕಾರ್ಯದರ್ಶಿಯಾಗಿದ್ದ ಲಲ್ನುನ್ಮಾವಿಯ ಚುವೌಗೊ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನೇ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವಂತೆ ಈ ಮೊದಲೇ ಮಿಜೋರಾಂ ಸಿಎಂ ಅಮಿತ್ ಶಾ ಅವರನ್ನು ಕೋರಿದ್ದರು. ಆದರೆ, ಕೇಂದ್ರ ರೇಣು ಶರ್ಮಾ ಅವರನ್ನು ಆ ಹುದ್ದೆ್ಎ ನೇಮಿಸಿದ್ದು, ಅವರು ನ.1ರಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅದೇ ದಿನ ಮಿಜೋರಾಂ ಸರ್ಕಾರ ಕೂಡ ಜೆಸಿ ರಾಮ್​ಥಂಗಾ ಅವರಿಗೆ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಆದೇಶಿಸಿತ್ತು. ಹೀಗಾಗಿ ಇದೀಗ ಇಬ್ಬರು ಮುಖ್ಯ ಕಾರ್ಯದರ್ಶಿಗಳಾಗಿದ್ದಾರೆ.

ಮಿಜೋರಾಂ ಜನರಲ್ಲಿ ಹೆಚ್ಚಿನವರಿಗೆ ಹಿಂದಿ ಬರುವುದಿಲ್ಲ. ನನ್ನ ಸಂಪುಟದ ಯಾರಿಗೂ ಹಿಂದಿ ಬರುವುದಿಲ್ಲ. ಕೆಲವರಿಗೆ ಇಂಗ್ಲಿಷ್ ಕೂಡ ಸರಿಯಾಗಿ ಗೊತ್ತಿಲ್ಲ. ಇಂಥ ಸ್ಥಿತಿಯಲ್ಲಿ ಮಿಜೋ ಭಾಷೆ ಗೊತ್ತಿಲ್ಲದವರೊಬ್ಬರು ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರೆ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಮಿಜೋರಾಂ ಸಿಎಂ ಜೊರಾಮ್​ಥಂಗಾ ಪತ್ರದಲ್ಲಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ಮಿಜೋರಾಂನಲ್ಲಿನ ಇಂಥದೊಂದು ಸನ್ನಿವೇಶದ ಕಾರಣದಿಂದಾಗಿಯೇ ರಾಜ್ಯ ಸ್ಥಾಪನೆಯಾದಾಗಿನಿಂದಲೂ ಮಿಜೋ ಭಾಷೆ ಗೊತ್ತಿಲ್ಲದವರನ್ನು ಕೇಂದ್ರ ಸರ್ಕಾರ ಇಲ್ಲಿಗೆ ನೇಮಿಸಿರಲಿಲ್ಲ. ಅವತ್ತಿನಿಂದಲೂ ಈ ರೂಢಿ ನಡೆದುಕೊಂಡು ಬಂದಿದೆ. ಇತರ ಯಾವುದೇ ರಾಜ್ಯಗಳಲ್ಲೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಕನಿಷ್ಠ ಅರಿವಾದರೂ ಇಲ್ಲದೆ ಹೋದವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುವುದಿಲ್ಲ ಎಂಬುದು ಗೊತ್ತೇ ಇರುವ ವಿಚಾರ ಎಂದು ಮಿಜೋರಾಂ ಸಿಎಂ ಹೇಳಿದ್ದಾರೆ.

ತಮ್ಮ ಮನವಿಯನ್ನು ಕೇಂದ್ರ ಪರಿಗಣಿಸುವ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button