ಸಚಿವ ಈಶ್ವರಪ್ಪರನ್ನು ಕೂಡಲೇ ಬಂಧಿಸಿ, ಸಂಪುಟದಿಂದ ಹೊರಹಾಕಬೇಕು: ಸಿ.ಎಂ.ಇಬ್ರಾಹಿಂ

ಮಂಡ್ಯ: ಹಿಜಾಬ್ ಎಂದರೆ ತಲೆ ಮೇಲೆ ಸೆರಗು ಮುಚ್ಚಿಕೊಳ್ಳುವುದು. ತಲೆ ಮೇಲೆ ಸೆರಗು ಹಾಕಿಕೊಳ್ಳುವುದು ತಪ್ಪೇ. ಇದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತು. ರಾಷ್ಟ್ರಪತಿಯಾಗಿದ್ದ ಪ್ರತಿಭಾಪಾಟೀಲ್ ಕೂಡ ತಲೆ ಮೇಲೆ ಸೆರಗು ಹಾಕುತ್ತಿದ್ದರು. ಇಳಕಲ್ ಸೀರೆಯುಟ್ಟವರು ಸೆರಗು ಹಾಕಿಕೊಳ್ಳುತ್ತಾರೆ. ಹಿಜಾಬ್ ಕೂಡ ಅದೇ ತರ. ಸೆರಗು ಹಾಕಿಕೊಳ್ಳುವುದು ಎಂದು ಪರಿಗಣಿಸಬೇಕು ಎಂದು ಸಲಹೆ ಅವರು ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿಶಾಲು ವಿಚಾರಗಳನ್ನು ಸುಮ್ಮನೆ ದೊಡ್ಡದು ಮಾಡಲಾಗಿದೆ. ಬಿಜೆಪಿಯವರಿಗೆ ಭಾವಾನಾತ್ಮಕ ವಿಚಾರಗಳು ಬೇಕು. ಗೋಹತ್ಯೆ, ರಾಮಮಂದಿರ ಮತ್ತಿತರ ವಿಚಾರಗಳು ಮರೆಯಾದವು. ಬೇರೆ ವಿಚಾರಗಳಿರಲಿಲ್ಲ. ಅದಕ್ಕೆ ಈಗ ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ ಎಂದು ಹೇಳಿದರು.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಇಬ್ರಾಹಿಂ, ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಈಶ್ವರಪ್ಪ ಹೀಗೆ ಹೇಳುತ್ತಾರೆ ಎಂದರೆ ಏನರ್ಥ? ಈ ರೀತಿ ಹೇಳಿಕೆ ನೀಡಿದ ದಿನವೇ ಅವರನ್ನು ಬಂಧಿಸಬೇಕಿತ್ತು. ಸಂಪುಟದಿಂದ ಹೊರ ಹಾಕಬೇಕಿತ್ತು. ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾನೇ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದರು.
ವಿಷ ಹಂಚಬಾರದು
ಈಶ್ವರಪ್ಪ ನೀನು ಕೇಸರಿ ಶಾಲು ಹಂಚುವ ಬದಲು ಪೆನ್ನು, ಪುಸ್ತಕ ಕೊಡು, ವಿಷ ಯಾಕೆ ಹಂಚುತ್ತಿಯಾ ಎಂದು ಈಶ್ವರಪ್ಪರನ್ನು ನೇರವಾಗಿ ಪ್ರಶ್ನಿಸಿದ ಇಬ್ರಾಹಿಂ ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದರು.
ಮುಸ್ಕಾನ್ ಧೈರ್ಯ ಮೆಚ್ಚಬೇಕು
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಕುರಿತು ಪ್ರತಿಕ್ರಿಯಿಸಿ, ಅಷ್ಟು ಹುಡುಗರ ನಡುವೆ ಧೈರ್ಯವಾಗಿ ನಿಂತು, ಏಕಾಂಗಿಯಾಗಿ ಸನ್ನಿವೇಶ ಎದುರಿಸಿದ್ದಾಳೆ. ಆಕೆ ಧೈರ್ಯ ಮೆಚ್ಚಬೇಕು. ಆಕೆ ಕರುನಾಡಿನ ಮಗಳು. ಆಕೆಯ ಧೈರ್ಯ ಮೆಚ್ಚಿ ಉಡುಗೊರೆ ಕೊಟ್ಟರೇ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಜೈಶ್ರೀರಾಮ್ ಎಂದರೆ ಪ್ರಚೋದನೆಯಲ್ಲ, ಆದರೆ ಅಲ್ಲಾಹುಅಕ್ಬರ್ ಎಂದರೆ ಪ್ರಚೋದನೆಯೇ. ನಾನು ಹರ ಹರ ಮಹಾದೇವ ಎನ್ನುತ್ತೇನೆ ಅದು ಪ್ರಚೋದನೆಯಾಗುತ್ತದೆಯೇ ಎಂದು ಇಬ್ರಾಹಿಂ ಪ್ರಶ್ನಿಸಿದರು. ನಂತರ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೂ ಭೇಟಿ ನೀಡಿ ಧೈರ್ಯ ತುಂಬಿದರು.
