ಮ್ಯಾನ್ ಪ್ಯಾಡ್ ಶಸ್ತ್ರಾಸ್ತ್ರ: ಇದು ಉಕ್ರೇನ್ ಬಲ!
ಕೀವ್: ರಷ್ಯಾ ಹಾಗೂ ನಡುವಿನ ಯುದ್ಧ ದಿನೇ ದಿನೇ ತೀವ್ರಗೊಳ್ಳುತ್ತಲೇ ಇದೆ. ರಷ್ಯಾ ಇದೀಗ ಉಕ್ರೇನ್ ನಾಗರೀಕರ ನೆಲೆಗಳನ್ನ ಗುರಿಯಾಗಿಸಿಕೊಂಡು ದಾಳಿಯನ್ನ ತೀವ್ರಗೊಳಿಸಿದೆ. ಹಲವು ಕಡೆ ವೈಮಾನಿಕ ದಾಳಿ ನಡೆಸುವ ಮೂಲಕ ಉಕ್ರೇನ್ ಸಂಪೂರ್ಣ ನಾಶಕ್ಕೆ ಪುಟಿನ್ ಪಡೆ ಮುಂದಾಗಿದೆ. ಆದ್ರೆ ರಷ್ಯಾ ಪಡೆಗಳಿಗೆ ಉಕ್ರೇನ್ ಸೇನೆಯಲ್ಲಿರೋ ಅದೊಂದು ಶಸ್ತ್ರಾಸ್ತ ಪ್ರಬಲ ಪೈಪೋಟಿ ನೀಡುತ್ತಿದೆ. ಇದು ಉಕ್ರೇನ್ ಬಲ ಎಂದರೆ ತಪ್ಪಾಗಲಿಕ್ಕಿಲ್ಲ..
ಹೌದು ಸತತ ಸತತ 24 ದಿನಗಳಿಂದ ರಷ್ಯಾ ಕ್ಷಿಪಣಿ, ರಾಕೆಟ್, ಶೆಲ್‌ಗಳಿಂದ ದಾಳಿ ಮಾಡುತ್ತಿದ್ದರೂ ಎದೆಗುಂದದ ಉಕ್ರೇನ್ ಪ್ರತಿರೋಧ ಒಡ್ಡುತ್ತಿದೆ. ಅದರಲ್ಲೂ, ಅಮೇರಿಕ, ನ್ಯಾಟೊ ಪಡೆಗಳು ಸೇರಿ ಹಲವು ರಾಷ್ಟ್ರಗಳು ಕಳುಹಿಸಿದ ‘ಮ್ಯಾನ್‌ಪ್ಯಾಡ್’ ಶಸ್ತ್ರಾಸ್ತ್ರಗಳು ಉಕ್ರೇನ್ ಸೈನಿಕರಿಗೆ ಸಿಕ್ಕ ಬಳಿಕವಂತೂ ಪುಟಿನ್ ಪಡೆಗಳು ನಡೆಸುತ್ತಿರುವ ವಾಯುದಾಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.
ಮ್ಯಾನ್‌ಪ್ಯಾಡ್ ವಿಶೇಷತೆ
Man portable air defence system ಅಥವಾ ಮ್ಯಾನ್‌ಪ್ಯಾಡ್‌ಗಳು ಲಘು ಶಸ್ತ್ರಾಸ್ತ್ರಗಳು, ಇವುಗಳನ್ನು ವಾಯುದಾಳಿಯನ್ನು ನಿಗ್ರಹಿಸಲು ಅಮೆರಿಕದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಸೈನಿಕರು ಸುಲಭವಾಗಿ ಹೆಗಲ ಮೇಲೆ ಹೊತ್ತುಕೊಂಡು ಹೋಗಬಹುದಾದ ಮ್ಯಾನ್‌ಪಾಡ್‌ಗಳು, ಭೂಮಿಯಿಂದ ಆಕಾಶದಲ್ಲಿರುವ ಗುರಿಗಳನ್ನು ಹೊಡೆದುರುಳಿಸುವ (ಸರ್ಫೇಸ್ ಟು ಏರ್)(Surface to Air) ಕ್ಷಿಪಣಿ ವ್ಯವಸ್ಥೆಯಾಗಿವೆ. ಡ್ರೋನ್, ಲಘು ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಮ್ಯಾನ್‌ಪ್ಯಾಡ್‌ಗಳನ್ನು ‘ಸ್ಟಿಂಗರ್’ ಎಂದೂ ಕರೆಯುತ್ತಾರೆ.
10-15 ಸಾವಿರ ಅಡಿಗಳವರೆಗೆ ಮ್ಯಾನ್‌ಪ್ಯಾಡ್ ಉಡಾವಣೆ ಸಾಮರ್ಥ್ಯ ಹೊಂದಿವೆ. 40-60 ಸಾವಿರ
ಅಡಿ ಎತ್ತರದವರೆಗೆ ಹಾರುವ ಹೆಲಿಕಾಪ್ಟರ್, ಯುದ್ಧವಿಮಾನಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಮ್ಯಾನ್‌ಪ್ಯಾಡ್‌ಗಳಿಗೆ ಇದೆ. ಉಕ್ರೇನ್‌ಗೆ ಅಮೆರಿಕ 600 ಸ್ಟಿಂಗರ್ ಕ್ಷಿಪಣಿಗಳನ್ನ ನೀಡಿದೆ. ಇನ್ನು ಬೈಡನ್ ಸರ್ಕಾರ ಸುಮಾರು 2600 ಶಸ್ತ್ರಾಸ್ತ್ರ ನಿಗ್ರಹ ಜಾವೆಲಿನ್ಗಳನ್ನ ಒದಗಿಸಿದೆ. ಇನ್ನು ಉಕ್ರೇನ್ ನೀಡಿರೋ ಮಾಹಿತಿ ಪ್ರಕಾರ ರಷ್ಯಾಗೆ ಆಗಿರುವ ಹಾನಿಯನ್ನ ನೋಡೋದಾದ್ರೆ, 14200 ರಷ್ಯನ್ ಸೈನಿಕರು ಮೃತಪಟ್ಟಿದ್ದಾರಂತೆ. ರಷ್ಯಾ ಪಡೆಗೆ ಸೇರಿದ 450 ಯುದ್ಧ ಟ್ಯಾಂಕರ್ಗಳು ಧ್ವಂಸಗೊಂಡಿವೆ. 112 ಹೆಲಿಕಾಪ್ಟರ್ ಗಳು ನೆಲಕ್ಕುರುಳಿವೆ. 12 ಡ್ರೋನ್ ಗಳು ಸ್ಪೋಟಗೊಂಡಿವೆ. ಇಷ್ಟೆಲ್ಲಾ ಹಾನಿ ಮಾಡಲು ಉಕ್ರೇನ್ ಬಳಿ ಇರುವ ಮ್ಯಾನ್ ಪ್ಯಾಡ್ ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರ ವಹಿಸಿವೆ.
