ಮಂಗಳೂರು – ಕಾಸರಗೋಡು ಬಸ್ ಸಂಚಾರ ಸ್ಥಗಿತ; ಸಂಸದ ಕಟೀಲ್ ಸೂಚನೆ

ಮಂಗಳೂರು: ಕೋವಿಡ್ ಸೋಂಕು ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುವ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಮುಂದಿನ 7 ದಿನಗಳ ಕಾಲ ಸ್ಥಗಿತಗೊಳಿಸಿರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಲು ಕ್ರಮ ಜರುಗಿಸಬೇಕು. ಪಕ್ಕದ ಕೇರಳದಲ್ಲಿ ಮತ್ತೆ ಕೋವಿಡ್ ಸೋಂಕು ವ್ಯಾಪಿಸಿದ್ದರಿಂದ ದ.ಕ ಜಿಲ್ಲೆಯಲ್ಲೂ ಸೋಂಕಿತರು ಹೆಚ್ಚಾಗಿದ್ದಾರೆ. ಗಡಿರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಿ ಕೋವಿಡ್ ಸೋಂಕಿತರು ಪ್ರವೇಶಿಸದಂತೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ಕೇರಳ ದಿಂದ ದ.ಕ ಜಿಲ್ಲೆಯ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟೀವ್ ವರದಿ ಹೊಂದಿರಬೇಕು. ಅತ್ತಿತ್ತ ಸಂಚಾರ ಮಾಡದೆ ವಿದ್ಯಾರ್ಥಿ ನಿಲಯಗಳಲ್ಲಿ ಒಂದು ವಾರ ಕಾಲ ಹೋಂ ಕ್ವಾರಂಟೈನ್ ಆಗಿರಲು ಸಂಬಂಧಿಸಿದವರು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಪಂ ಸಿಇಒ ಡಾ.ಕುಮಾರ್, ಎಸ್ಪಿ ಋಷಿಕೇಶ್ ಭಗವಾನ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಇದ್ದರು.
