ಬಾಯಿಗೆ ಬಂದಂತೆ ಮಾತಾಡಿದರೆ ನಾಲಿಗೆ ಕತ್ತರಿಸುತ್ತೇವೆ; ತೆಲಂಗಾಣ ಬಿಜೆಪಿ ಅಧ್ಯಕ್ಷರಿಗೆ ಕೆಸಿಆರ್ ಉಗ್ರ ಎಚ್ಚರಿಕೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಬಾಯಿಗೆ ಬಂದಂತೆ ಮಾತಾಡಿದರೆ ನಾಲಿಗೆ ಕತ್ತರಿಸುವೆ ಉಗ್ರ ಸ್ವರೂಪದ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ತೆಲಂಗಾಣದ ರೈತರಿಗೆ ಭತ್ತ ಬೆಳೆಯುವಂತೆ ಹೇಳಿರುವುದು, ಅದನ್ನು ಕೇಂದ್ರ ಖರೀದಿಸಲಿದೆ ಎಂದು ಸುಳ್ಳು ಭರವಸೆ ನೀಡಿದಂತೆ. ಆದರೆ ಭತ್ತವನ್ನು ತಾನು ಖರೀದಿಸುವುದಿಲ್ಲ ಎಂದು ಕೇಂದ್ರ ಹೇಳಿದೆ. ರೈತರು ನಷ್ಟವಾಗದಂತೆ ಬೇರೆ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಕೃಷಿ ಸಚಿವರು ಹೇಳಿದ್ದಾರೆ. ಕೇಂದ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಸು ಕೆಸಿಆರ್ ಆರೋಪಿಸಿದ್ದಾರೆ.
ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಸಂಗ್ರಹಿತ ಅಕ್ಕಿಯನ್ನು ಖರೀದಿಸುವಂತೆ ಕೇಳಿದ್ದೇನೆ. ಅವರು ನಿರ್ಧಾರ ತೆಗೆದುಕೊಂಡು ತಿಳಿಸುವುದಾಗಿ ಹೇಳಿದ್ದು, ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತೆಲಂಗಾಣದಲ್ಲಿ ಈಗಾಗಲೇ ಕಳೆದ ವರ್ಷ ಬೆಳೆದ ಸುಮಾರು 5 ಲಕ್ಷ ಟನ್ ಭತ್ತವಿದೆ. ಕೇಂದ್ರ ಅದನ್ನು ಖರೀದಿಸುತ್ತಿಲ್ಲ ಎಂದು ಅವರು ಹೇಳಿದರು.
ಯಾವುದನ್ನು ಕೇಂದ್ರ ಖರೀದಿಸುತ್ತಿಲ್ಲವೊ ಅದನ್ನು ಬೆಳೆಯಲು ಇಲ್ಲಿ ಬಿಜೆಪಿ ಅಧ್ಯಕ್ಷರು ರೈತರಿಗೆ ಹೇಳುತ್ತಿರುವುದರ ವಿರುದ್ಧ ಕೆಸಿಆರ್ ಹರಿಹಾಯ್ದರು. ಭತ್ತ ಖರೀದಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೆ, ಇಲ್ಲಿನ ಬಿಜೆಪಿ ಭತ್ತ ಖರೀದಿಸುತ್ತೇವೆ ಎಂದು ಹೇಳುತ್ತಿದೆ. ಬಾಯಿಗೆ ಬಂದಂತೆ ಮಾತನಾಡಬೇಡಿ. ನಮ್ಮ ಬಗ್ಗೆ ಅನಗತ್ಯ ಟೀಕೆ ಮಾಡಿದರೆ ನಿಮ್ಮ ನಾಲಿಗೆ ಕತ್ತರಿಸುತ್ತೇವೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಸಿದರು.
ನನ್ನನ್ನು ಜೈಲಿಗೆ ಕಳಿಸುವುದಾಗಿ ಸಂಜಯ್ ಬಂಡಿ ಹೇಳುತ್ತಿದ್ದಾರೆ. ಒಮ್ಮೆ ಮುಟ್ಟಿ ನೋಡಲಿ ಎಂದು ಸವಾಲೆಸೆದರು.
ರೈತ ವಿರೋಧಿ ನೀತಿಗಳಿಗಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕೆಸಿಆರ್, ನೀವು ರೈತರ ಮೇಲೆ ಕಾರು ಚಲಾಯಿಸಿ ಕೊಲ್ಲುತ್ತಿದ್ದೀರಿ. ರೈತರನ್ನು ಹೊಡೆದು ಸಾಯಿಸುವಂತೆ ಬಿಜೆಪಿ ಮುಖ್ಯಮಂತ್ರಿ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
