ಅಧ್ಯಕ್ಷರೂ ಇಲ್ಲ, ಚರ್ಚೆಯೂ ಇಲ್ಲ; ಕಾಂಗ್ರೆಸ್ ಸ್ಥಿತಿ ಸಂಕಟ ತಂದಿದೆ; ಹೈಕಮಾಂಡ್ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ

ನವದೆಹಲಿ: ಪಂಜಾಬ್ ಕಾಂಗ್ರೆಸ್ನಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿರುವ ಹೊತ್ತಿನಲ್ಲಿಯೇ ಜಿ-23 ಗುಂಪಿನ ಕಾಂಗ್ರೆಸ್ ಹಿರಿಯ ನಾಯಕ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಾಯಕತ್ವದ ವಿರುದ್ಧ ಹರಿಹಾಯ್ದರು.
ಪಕ್ಷದ ಪ್ರಮೂಖ ನಾಯಕರೆಲ್ಲ ಪಕ್ಷವನ್ನು ಬಿಟ್ಟುಹೋಗುತ್ತಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠರಾದವರೂ ಕೂಡ ಪಕ್ಷವನ್ನು ತೊರೆಯುತ್ತಿದ್ದಾರೆ. ಎಲ್ಲಾ ರಾಜ್ಯಗಳ ಕಾಂಗ್ರೆಸ್ನಲ್ಲೂ ಇದೇ ಸ್ಥಿತಿಯಿದೆ. ಯಾಕೆ ಹೀಗಾಗುತ್ತಿದೆ ಎಂದು ಸಿಬಲ್ ಪ್ರಶ್ನಿಸಿದರು.
ಕಾಂಗ್ರೆಸ್ನ ಇಂದಿನ ಸ್ಥಿತಿ ನೋಡಿದರೆ ಸಂಕಟವಾಗುತ್ತದೆ. ನಮ್ಮ ಪಕ್ಷಕ್ಕೆ ಅಧ್ಯಕ್ಷರೂ ಇಲ್ಲ, ಕಾರ್ಯಕಾರಿ ಸಮಿತಿಯೂ ಇಲ್ಲ, ಚರ್ಚೆಯೂ ಇಲ್ಲ. ಯಾರು ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುತ್ತಾರೊ ತಿಳಿಯದಾಗಿದೆ ಎಂದರು.
ಪಂಜಾಬ್ ಕಾಂಗ್ರೆಸ್ನಲ್ಲಿ ಎದ್ದಿರುವ ಬಿಕ್ಕಟ್ಟು ಇನ್ನೂ ಅಪಾಯಕಾರಿ ಮಟ್ಟದ್ದಾಗಿದೆ ಎಂದು ನೊಂದು ನುಡಿದ ಅವರು, ಪಕ್ಷದೊಳಗೆ ಅತಿ ಶೀಘ್ರದಲ್ಲಿ ಮಹತ್ವದ ಬದಲಾವಣೆ ಆಗಬೇಕಿದೆ. ಎಲ್ಲರ ದೃಷ್ಟಿಕೋನವನ್ನೂ ಪರಿಗಣಿಸಿ ಮುನ್ನಡೆಯುವ ಧೋರಣೆಯ ಜರೂರು ಇದೆ ಎಂದರು.
ಕಾಂಗ್ರೆಸ್ ಮಾತ್ರವೇ ಈ ಗಣರಾಜ್ಯವನ್ನು ರಕ್ಷಿಸಬಲ್ಲ ಪಕ್ಷ. ಆದರೆ ಅದರ ಸ್ಥಿತಿ ಹೀಗಾಗಿದೆ ಎಂದು ಅವರು ಹೇಳಿದರು. ಇಲ್ಲಿ ನಾವಿದ್ದೇವೆ. ನಮ್ಮ ಜೊತೆಗೆ ಚರ್ಚಿಸಿ ಎಂದೂ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವವೆಂದರೆ, ಕೇಂದ್ರದಲ್ಲಿ ಕುಳಿತ 20 ಮಂದಿಯಿಂದ ಆಗುವುದಲ್ಲ. ತಳಮಟ್ಟದಿಂದ ಪ್ರತಿಯೊಂದು ಹಳ್ಳಿಯ ಜನರು ಇದಕ್ಕಾಗಿ ಕೆಲಸ ಮಾಡಬೇಕಾಗುತ್ತದೆ ಎಂಬ ಗಾಂಧಿಯ ಮಾತನ್ನು ಮಾಧ್ಯಮ ಗೋಷ್ಠಿಯಲ್ಲಿ ಉಲ್ಲೇಖಿಸುವ ಮೂಲಕ, ಗಾಂಧಿ ಕುಟುಂಬವನ್ನು ಸಿಬಲ್ ತಿವಿದರು.
