ಮೆಕ್ಸಿಕೊ ರೆಸ್ಟೋರೆಂಟ್ನಲ್ಲಿ ಶೂಟೌಟ್; ಭಾರತೀಯ ಟ್ರಾವೆಲ್ ಬ್ಲಾಗರ್ ಸಾವು

ಲಾಸ್ ಏಂಜಲೀಸ್: 25 ವರ್ಷದ ಕ್ಯಾಲಿಫೋರ್ನಿಯಾ ನಿವಾಸಿ, ಭಾರತೀಯ ಮೂಲದ ಮಹಿಳಾ ಟೆಕ್ಕಿ ತಮ್ಮ ಜನ್ಮದಿನ ಆಚರಿಸಲು ಮೆಕ್ಸಿಕೊದಲ್ಲಿದ್ದ ವೇಳೆ ಶೂಟೌಟ್ನಲ್ಲಿ ಮೃತಪಟ್ಟಿದ್ದಾರೆ.
ಕೆರಿಬಿಯನ್ ಕರಾವಳಿ ರೆಸಾರ್ಟ್ ಒಂದರಲ್ಲಿ ಎರಡು ಡ್ರಗ್ ಗ್ಯಾಂಗ್ಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಇಬ್ಬರು ವಿದೇಶಿ ಪ್ರವಾಸಿಗರಲ್ಲಿ ಈಕೆ ಒಬ್ಬರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂಜಲಿ ರಿಯಾತ್ ಮೃತ ಯುವತಿಯಾಗಿದ್ದು, ಘಟನೆ ಬುಧವಾರ ರಾತ್ರಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಅಂಜಲಿ ಜೊತೆ ಸಾವನ್ನಪ್ಪಿದ ಇನ್ನೊಬ್ಬರು ಜರ್ಮನ್ ಪ್ರವಾಸಿ ಎಂದು ಕ್ಯಾಲಿಫೋರ್ನಿಯಾ ನ್ಯೂಸ್ಟೈಮ್ಸ್.ಕಾಮ್ ನ್ಯೂಸ್ ಪೋರ್ಟಲ್ ವರದಿ ಹೇಳಿದೆ. ಅಕ್ಟೋಬರ್ 22ರಂದು ರಿಯಾತ್ ತನ್ನ ಹುಟ್ಟುಹಬ್ಬಕ್ಕೆ ಮುಂಚಿನ ದಿನವೇ ಅಲ್ಲಿಗೆ ಬಂದಿದ್ದರೆಂದು ಅದು ತಿಳಿಸಿದೆ.
ಆಕೆಯ ಇನ್ಸ್ಟಾಗ್ರಾಮ್ ಖಾತೆಯು ಪ್ರಕಾರ, ಆಕೆ ಹಿಮಾಚಲ ಪ್ರದೇಶದ ಟ್ರಾವೆಲ್ ಬ್ಲಾಗರ್. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಯಾಹೂ ಉದ್ಯೋಗಿಯಾಗಿದ್ದ ಅಂಜಲಿ, ಜುಲೈನಿಂದ ಲಿಂಕ್ಡ್ಇನ್ನಲ್ಲಿ ಎಂಜಿನಿಯರ್ ಆಗಿದ್ದರು.
ಬುಧವಾರ ರಾತ್ರಿ ರಿಯಾತ್ ಮತ್ತಿತರ ನಾಲ್ವರು ವಿದೇಶಿ ಪ್ರವಾಸಿಗರು ರೆಸ್ಟೋರೆಂಟ್ನ ಟೆರೇಸ್ನಲ್ಲಿ ಊಟ ಮಾಡುತ್ತಿದ್ದಾಗ ಶೂಟೌಟ್ ನಡೆದು ಸಾವು ಸಂಭವಿಸಿತೆಂದು ವರದಿಯಾಗಿದೆ.
