ಮೆಟ್ರೋ
ಬೆಂಗಳೂರು ಉಸ್ತುವಾರಿಯನ್ನು ಸಿಎಂ ವಹಿಸಿಕೊಳ್ಳಲಿ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಹಿಸಿಕೊಳ್ಳುವುದು ಒಳ್ಳೇಯದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಮತ್ತು ಶಾಸಕರ ನಡುವೆ ತೀರ್ವ ಒತ್ತಡ ಮತ್ತು ಲಾಬಿಗೆ ಅವಕಾಶ ಕಲ್ಪಿಸಿರುವ ಈ ವಿಚಾರ ಉಪಚುನಾವಣೆ ಬಳಿಕೆ ಇತ್ಯರ್ಥ ಆಗಬಹುದು ಎಂದಿದ್ದಾರೆ.
ಮುಖ್ಯಮಂತ್ರಿ ಬಳಿ ಉಸ್ತುವಾರಿ ಇದ್ದರೆ ಅನುದಾನ ಬೇಗನೇ ಸಿಗುತ್ತದೆ. ಕಾಮಗಾರಿಗಳಿಗೂ ತ್ವರಿತವಾಗಿ ಅನುಮತಿ ಸಿಗುತ್ತದೆ ಮತ್ತು ಪೂರ್ಣಗೊಳಿಸಲು ಸಾಧ್ಯ. ನಗರದಲ್ಲಿ ಮಳೆ ನಿಂತ ಕೂಡಲೇ ರಸ್ತೆಗಳ ಗುಂಡಿ ಮುಚ್ಚುವುದು, ಡಾಂಬರೀಕರಣ ಸೇರಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ಮಧ್ಯೆ ಇತ್ತೀಚೆಗೆ ಮಾತಿನ ಜಟಾಪಟಿ ನಡೆದಿದ್ದನ್ನು ಸ್ಮರಿಸಬಹುದು.



