Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಉಕ್ರೇನ್ ನಲ್ಲಿ ಭಾರತೀಯರ ಅಸಹಾಯಕ ಸ್ಥಿತಿಗೆ ಕೇಂದ್ರದ ಅನಿಶ್ಚಿತ ನೀತಿ ಕಾರಣ: ಸಿದ್ದರಾಮಯ್ಯ

ಬೆಂಗಳೂರು: ಯುದ್ಧಗ್ರಸ್ತ ಯುಕ್ರೇನ್ ನಲ್ಲಿ ಸಂಕಷ್ಟಕ್ಕೆ ಈಡಾಗಿರುವ ಭಾರತೀಯರು ಮುಖ್ಯವಾಗಿ  ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸುತ್ತಿರುವಂತಹ ಅಸಹಾಯಕ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರದ ಅನಿಶ್ಚಿತ ಮತ್ತು ಬೇಜವಾಬ್ದಾರಿ ನೀತಿ-ನಿಲುವುಗಳೂ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಕೆಲವು ತಿಂಗಳುಗಳಿಂದ ಯುಕ್ರೇನ್ ಮತ್ತು ರಷ್ಯಾ ನಡುವೆ ಯಾವುದೇ ಕ್ಷಣದಲ್ಲಿ ಯುದ್ದ ಸ್ಫೋಟವಾಗಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ದೇಶಗಳು ಅಲ್ಲಿರುವ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸು ಕರೆಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿತ್ತು. ಆದರೆ ಭಾರತ ಮಾತ್ರ ಯುದ್ದ ಶುರುವಾಗುವ ವರೆಗೆ ಭಾರತೀಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ದೂರಿದ್ದಾರೆ.

ತನ್ನನ್ನು ವಿಶ್ವಗುರು ಎಂದು ಕೊಂಡಾಡುತ್ತಾ ಭಕ್ತರು ನಡೆಸುತ್ತಿರುವ ಬೋಪರಾಕ್ ಭಜನೆಗೆ ಪ್ರಧಾನಿಯವರು ತಲೆ ತೂಗುತ್ತಾ ಕಾಲಹರಣ ಮಾಡಿದರೇ ವಿನಹ ಯುದ್ಧಗ್ರಸ್ತ ಯುಕ್ರೇನ್ ನಲ್ಲಿರುವ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನನೀಡಲೇ ಇಲ್ಲ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ನವೀನ್ ಜೀವ ಉಳಿಯುತಿತ್ತು

ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿಯೇ ಕರ್ನಾಟಕದ ಯುವ ವಿದ್ಯಾರ್ಥಿ ನವೀನ್ ಪ್ರಾಣ ಕಳೆದುಕೊಂಡು ಆತನ ಹೆತ್ತವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆ ವಿದ್ಯಾರ್ಥಿಯ ಸಹಪಾಠಿಗಳು ಮತ್ತು ಹೆತ್ತವರ ಹೇಳಿಕೆಗಳೇ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರು ಸಕಾಲದಲ್ಲಿ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ ಅವರನ್ನು ಭಾರತಕ್ಕೆ ಕರೆತಂದಿದ್ದರೆ ಅಮೂಲ್ಯವಾದ ಜೀವವೊಂದು ಉಳಿಯುತ್ತಿತ್ತು.

ಭಾರತದ ನಿಲುವಿಗೆ ಬದ್ಧ

ನಮ್ಮೊಳಗಿನ ರಾಜಕೀಯ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವ್ಯತ್ಯಾಸಗಳು ಏನೇ ಇದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕರ್ತವ್ಯ ಪ್ರಜ್ಞೆಯಿಂದಾಗಿ ಕೇಂದ್ರ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಪೂರ್ಣವಾಗಿ ನೀಡಲು ನಾನು ಬಯಸುವುದಿಲ್ಲ. ಯುಕ್ರೇನ್ ಮತ್ತು ರಷ್ಯಾ ನಡುವಿನ ಈಗಿನ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಲೇ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆದರೆ ನರೇಂದ್ರ ಮೋದಿ ಸರ್ಕಾರ ಯುಕ್ರೇನ್ ನಿಂದ ಭಾರತೀಯರನ್ನು ಕರೆತರುವ ಕಾರ್ಯಚಾರಣೆಗೂ ಗಂಗಾ ನದಿಯ ಹೆಸರು ಕೊಟ್ಟು ಅದನ್ನು ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಬಳಸಲು ಹೊರಟಿದೆ. ಇದು ಭಾರತೀಯ ಜನತಾ ಪಕ್ಷದ ಕ್ಷುಲಕ ರಾಜಕೀಯದ ದುರ್ಬುದ್ಧಿಗೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಜೋಷಿ ಹೇಳಿಕೆ ಬೇಜವಾಬ್ದಾರಿತನದ್ದು

ವಿದೇಶದಲ್ಲಿ ವೈದ್ಯಕೀಯ ಪದವಿ‌ ಪಡೆದು ಬರುವವರು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯ ಇರುವ ಪರೀಕ್ಷೆಯಲ್ಲಿ ಪಾಸಾಗುವುದಿಲ್ಲ ಎಂಬ ಸಚಿವ ಪ್ರಹ್ಲಾದ ಜೋಷಿಯವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ.

ಕೇಂದ್ರದ ನರೇಂದ್ರ ಮೋದಿ‌ ಸರ್ಕಾರ ಏಕರೂಪದ ಪರೀಕ್ಷೆಯ ನೆಪದಲ್ಲಿ  ನೀಟ್ ಪರೀಕ್ಷೆಯನ್ನು ಗೊಂದಲಮಯವಾಗಿ ಮಾಡಿರುವ ಕಾರಣದಿಂದ ಆಗಿರುವ ಅನಾಹುತಗಳ‌ ಬಗ್ಗೆ ‌ ಚರ್ಚಿಸಲು ಇದು ಸರಿಯಾದ ಕಾಲ‌ ಅಲ್ಲ. ಸಚಿವರು ಇಂತಹ ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲಿಗೆ ಯುಕ್ರೇನ್ ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ಹರಿಸಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button