Budget Session 2022: ಕೇಂದ್ರ ಸರ್ಕಾರ ಸಾಧನೆ ಕೊಂಡಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ನವದೆಹಲಿ : ಇಂದಿನಿಂದ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನ ಉದ್ದೇಶಿಸಿ ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರು, ಕೇಂದ್ರ ಸರ್ಕಾರದ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ.
ಕೊರೊನಾ 3ನೇ ಅಲೆ ತಡೆಯಲು ಸರ್ಕಾರ ನಿರಂತರ ಹೋರಾಟ ನಡೆಸುತ್ತಿದೆ. ಲಸಿಕಾ ಅಭಿಯಾನವನ್ನ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ. ಔಷಧ ವಲಯದಲ್ಲಿ ದೇಶದಲ್ಲಿ ಹೆಚ್ಚು ಸಾಧನೆ ಮಾಡಲಾಗುತ್ತಿದೆ. 8 ಲಸಿಕೆಗಳ ಬಳಕ್ಕೆ ಅನುಮತಿ ನೀಡಲಾಗಿದೆ. ಜನರ ಆರೋಗ್ಯ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಕೊರೊನಾ ಲಸಿಕಾ ಅಭಿಯಾನದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಫ್ತು ಉತ್ತೇಜನಕ್ಕೆ ಸರ್ಕಾರ ಒತ್ತು ನೀಡಿದೆ ಕೃಷಿ ಉತ್ಪನ್ನ ದಾಖಲೆ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆಯಾಗುತ್ತಿದ್ದು, ಯುವಕರ ಕೌಶಲ್ಯ ವೃದ್ಧಿಗೆ ಅನುಕೂಲವಾಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.
ಇನ್ನು ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
ನಾಳೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ :
ಕೇಂದ್ರ ಸರ್ಕಾರದ 2022ನೇ ವರ್ಷದ ಬಜೆಟ್‌ನ ಅಧಿವೇಶನವು ಇಂದಿನಿಂದ ಆರಂಭವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ, ಪೆಗಾಸಸ್ ಸ್ಪೈವೇರ್ ಅನ್ನು ಇಸ್ರೇಲ್‌ನಿಂದ ಭಾರತದ ಖರೀದಿಸಿದೆ ಎಂಬ ವರದಿಯು ವಿಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ರೈತರ ಸಮಸ್ಯೆಗಳು, ಗಡಿಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಹಣದುಬ್ಬರ ವಿಚಾರಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳಿಗೆ ಪೆಗಾಸಸ್ ವಿಚಾರವು ಹೊಸ ಅಸ್ತ್ರವಾಗಿದೆ ಎನ್ನಲಾಗಿದೆ,
