ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಸಿಎಂ ನಿರ್ಧಾರಕ್ಕೆ ಬದ್ಧ: ಶಾಸಕ ರೇಣುಕಾಚಾರ್ಯ

ದಾವಣಗೆರೆ: ಜಿಲ್ಲೆಯ ಐವರು ಶಾಸಕರು ಒಟ್ಟಾಗಿ ಹೋಗಿ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ. ನಾನು ದೆಹಲಿಗೆ ಹೋಗಿ ಲಾಬಿ ಮಾಡಲ್ಲ. ನನ್ನ ಕ್ಷೇತ್ರದ ಜನರ ಹಿತ ಮುಖ್ಯ. ಹಾಗಾಗಿ ಇಲ್ಲಿಗೆ ಬಂದಿರುವೆ. ಸಿಎಂ ಹಾಗೂ ಹೈಕಮಾಂಡ್ ನನಗೆ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರಿಗೆ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್. ವಿ. ರಾಮಚಂದ್ರಪ್ಪರ ಜೊತೆ ತೆರಳಿ ಮನವಿ ಮಾಡಿದ್ದೇವೆ. ಯಾರಿಗಾದರೂ ಅವಕಾಶ ಕೊಡಿ ಎಂಬುದಾಗಿ ಕೇಳಿದ್ದೇವೆ. ವರಿಷ್ಠರು ಸಚಿವ ಸ್ಥಾನ ನನಗೆ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯಂತೆ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ಸಿಎಂ ಬೊಮ್ಮಾಯಿ, ವರಿಷ್ಠರು ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಸಿಎಂ ಪರಮಾಧಿಕಾರ ಎಂದು ರೇಣುಕಾಚಾರ್ಯ ತಿಳಿಸಿದ
ನಾನು ಯಾವತ್ತು ಲಾಬಿ ಮಾಡಲ್ಲ. ಲಾಬಿ ಮಾಡುವುದಿದ್ದರೆ ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ ಎಂದು ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ನೀವು ಪ್ರಬಲ ಆಕಾಂಕ್ಷಿನಾ ಎಂದು ಕೇಳಿದ್ದರು. ಅದಕ್ಕೆ ಹಳ್ಳಿ ಕಡೆ ಮುಖ ಮಾಡುತ್ತೇನೆ. ದೆಹಲಿ ಕಡೆಗೆ ಹೋಗಲ್ಲ ಎಂದಿದ್ದೆ. ದಾವಣಗೆರೆ ಮಿರ್ಚಿ ಮಂಡಕ್ಕಿ, ಬೆಣ್ಣೆದೋಸೆಗೆ ಫೇಮಸ್. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಸಚಿವ ಸ್ಥಾನಕ್ಕಾಗಿ ಶಾಸಕರು ಲಾಬಿ ಮಾಡುತ್ತಿರುವ ಮಧ್ಯೆಯೇ ಸ್ವ ಕ್ಷೇತ್ರದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಗಳ ಪ್ರವಾಸ ಮಾಡುತ್ತಿರುವ ರೇಣುಕಾಚಾರ್ಯ ತಾಲೂಕಿನ ಮಾರಿಕೊಪ್ಪ, ಹತ್ತೂರು, ದೊಡ್ಡೇರಹಳ್ಳಿ, ಮಾದೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳೊಂದಿಗೆ ಹಳ್ಳಿ ಹಳ್ಳಿ ಸುತ್ತಿ ವರದಿ ನೀಡುವಂತೆ ಸೂಚಿಸಿದ ಶಾಸಕರು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಾಳೆ ಅಧಿಕಾರರಿಗಳೊಂದಿಗೆ ಸಭೆ ನಡೆಸಲಿರುವ ರೇಣುಕಾಚಾರ್ಯ ಅವರು ವರದಿ ಪಡೆದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
