ನೆರೆ ಪ್ರವಾಹ ತುರ್ತು ಪರಿಹಾರಕ್ಕಾಗಿ 660 ಕೋಟಿ ರೂ ಬಿಡುಗಡೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಬೆಳಗಾವಿ, ಉತ್ತರಕನ್ನಡ, ಉಡುಪಿ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ತಲೆದೋರಿದ್ದ ಪ್ರವಾಹ ಹಾಗೂ ಮಳೆಹಾನಿ ಪ್ರದೇಶಗಳಲ್ಲಿ ತುರ್ತು ಪರಿಹಾರಕ್ಕಾಗಿ ರಾಜ್ಯಸರ್ಕಾರಿ 660 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮಳೆ ನಿಂತಿದೆ. ಆದರೆ ವಸತಿ ಪ್ರದೇಶ, ಹೊಲ-ಗದ್ದೆಗಳಲ್ಲಿ ಈಗಲೂ ನೀರು ನಿಂತಿದೆ. ಕೃಷ್ಣ ನದಿಪಾತ್ರ ಸೇರಿದಂತೆ ಒಟ್ಟು ರಾಜ್ಯದ 466 ಗ್ರಾಮಗಳಲ್ಲಿ ತೊಂದರೆಯಾಗಿದೆ. ಇದರಿಂದ 13 ಮಂದಿ ಸಾವನ್ನಪ್ಪಿದ್ದು ಒಬ್ಬರು ನಾಪತ್ತೆಯಾಗಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದ ಮುಖ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ರಾಜ್ಯ ಸರ್ಕಾರದಿಂದ 510 ಕೋಟಿ ರೂಪಾಯಿ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 150 ಕೋಟಿ ರೂಪಾಯಿ, ಒಟ್ಟು 660 ಕೋಟಿ ರೂಪಾಯಿ ಬಿಡುಗಡೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ 700 ಕೋಟಿ ರೂಪಾಯಿಗೂ ಅಧಿಕ ಹಣ ಇದೆ ಎಂದು ಸಿಎಂ ವಿವರಿಸಿದರು.
ಮನೆಹಾನಿಗೆ ಕೂಡಲೇ 10 ಸಾವಿರ ಪರಿಹಾರ
ಮಳೆ ಮತ್ತು ಪ್ರವಾಹದಿಂದಾದ ಮನೆಕುಸಿತ, ಬೆಳೆನಾಶ ಕುರಿತು 15 ದಿನಗಳ ಒಳಗೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಮನೆ ಬಿದ್ದವರಿಗೆ ತಕ್ಷಣ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಈಗಾಗಲೇ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಎನ್ ಡಿ ಆರ್ ಎಫ್ ನಿಯಮಾನುಸಾರ ಪೂರ್ಣವಾಗಿ ಮನೆ ಬಿದ್ದಿದ್ದರೆ 95 ಸಾವಿರ ಪರಿಹಾರ ನೀಡಬಹುದು. ಆದರೆ ಯಡಿಯೂರಪ್ಪ ಸರ್ಕಾರ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆಗೆ ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ಹಾಗೂ ಅಲ್ಪಹಾನಿಯಾಗಿದ್ದರೆ 50 ಸಾವಿರ ರೂಪಾಯಿ ನೀಡಲು ನಿಶ್ಚಯಿಸಿತ್ತು. ಅದೇ ಮಾನದಂಡ ಈಗಲೂ ಅನುಸರಿಸುವಂತೆ ಸೂಚಿಸಲಾಗಿದೆ.
ಮಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡಕ್ಕೆ ಮನವಿ
ಕಳೆದ ವರ್ಷ ಪ್ರವಾಹ ಹಾಗೂ ಮಳೆಹಾನಿಯಿಂದ ತೊಂದರೆ ಅನುಭವಿಸಿದವರಿಗೆ ಪರಿಹಾರ ರೂಪದಲ್ಲಿ 625 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಮುಂಗಡವಾಗಿ ಬಿಡುಗಡೆ ಮಾಡಿತ್ತು. ಆ ಹಣವನ್ನು ಕೇಂದ್ರ ಸರ್ಕಾರ ಈಗ ಮರುಪಾವತಿಸಿದೆ. ಈ ಬಾರಿ ಮಳೆ ಹಾಗೂ ಪ್ರವಾಹ ಹಾನಿ ಕುರಿತು ಪೂರ್ಣ ಸಮೀಕ್ಷೆಗೆ ಕೂಡಲೇ ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈಗಾಗಲೇ ಮನವಿ ಮಾಡಲಾಗಿದೆ ಎಂದೂ ಸಿಎಂ ಬೊಮ್ಮಾಯಿ ತಿಳಿಸಿದರು.
