Breaking NewsLatestಜಿಲ್ಲಾ ಸುದ್ದಿರಾಜಕೀಯಸುದ್ದಿಹುಬ್ಬಳ್ಳಿ - ಧಾರವಾಡ

ಸಚಿವ ಸ್ಥಾನದ ಆಸೆ ಇಟ್ಟುಕೊಂಡು‌ ನಾನು ಕೆಲಸ ಮಾಡುತ್ತಿಲ್ಲ: ಬಿ ವೈ ವಿಜೆಯೇಂದ್ರ

ಹುಬ್ಬಳ್ಳಿ: ನಾನು ದೆಹಲಿಗೆ ತೆರಳಿದ್ದು, ನನ್ನ ವೈಯಕ್ತಿಕ ಕೆಲಸಕ್ಕಾಗಿ ಹೊರತು ಸಚಿವ ಸ್ಥಾನದ ಲಾಬಿ ನಡೆಸುವುದಕ್ಕಲ್ಲ. ದೆಹಲಿಗೆ ತೆರಳಿದ್ದ ವೇಳೆ ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಕುರಿತು ಮಾತ್ರ ಚರ್ಚೆ ಮಾಡಿದ್ದೇವೆ. ಜೊತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ನಮ್ಮ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಸಚಿವ ಸ್ಥಾನದ ಆಸೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜೆಯೇಂದ್ರ ಸ್ಪಷ್ಟ ಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಗುರಿಯಾಗಿದೆ. ನನಗೆ ಯಾವ ಜವಾಬ್ದಾರಿ ನೀಡಬೇಕು ಎನ್ನುವುದು ನಮ್ಮ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಅಲ್ಲದೆ ನಮ್ಮ ತಂದೆಯವರು ಮಗ ವಿಜೆಯೇಂದ್ರನಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಯಡಿಯೂರಪ್ಪನವರು ಎಂದಿಗೂ ಕೂಡಾ ಸಿಎಂ ಆಗಬೇಕು, ಮಂತ್ರಿ ಆಗಬೇಕು ಎಂದು ಹೋರಾಟಗಳನ್ನು ಮಾಡಿಲ್ಲ. ಅದೇ ರೀತಿಯಾಗಿ ನಾವು ಕೂಡಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದರು.

ರಾಜ್ಯದಲ್ಲಿಯು ಕಾಂಗ್ರೆಸ್ ದೂಳಿಪಟವಾಗಲಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರವರು ತಮ್ಮ ಪಕ್ಷದ ಯುವ ಕಾರ್ಯಕರ್ತರ ಸಮಾವೇಶದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಯುವಕರ ಸದಸ್ಯತ್ವವವೇ ಆಗುತ್ತಿಲ್ಲ‌ ಎಂದು ಹೇಳಿದ್ದಾರೆ. ಇದಕ್ಕೆ ಅದರದೇ ಆದ ಹಲವಾರು ಕಾರಣಗಳು ಇವೆ. ದೇಶವ್ಯಾಪಿ ಯುವ ಸಮುದಾಯ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಮೆಚ್ಚಿಕೊಂಡು ಬೆಂಬಲವಾಗಿ ಅವರೊಂದಿಗೆ ಇದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಯುವಕರು ಹೇಗೆ ಹೋಗುತ್ತಾರೆ. ಹಾಗಾಗಿ ಬರುವ ದಿನಗಳಲ್ಲಿ ರಾಜ್ಯದಲ್ಲಿಯು ಕಾಂಗ್ರೆಸ್ ದೂಳಿಪಟವಾಗಲಿದೆ ಎಂದು ಭವಿಷ್ಯ  ನುಡಿದರು.

ಈಗಾಗಲೇ ರಾಜಕೀಯ ವಲಯದಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆಯನ್ನು ಅವಧಿಗೂ ಮುನ್ನವೇ ನಡೆಸಲಾಗುತ್ತದೆ ಎಂಬ ವದಂತಿಗಳು ಹಬ್ಬುತ್ತಿವೆ. ಇದರ ಬಗ್ಗೆ ನಮ್ಮ ವರಿಷ್ಠರು ಹಾಗೂ ರಾಜ್ಯ ನಾಯಕರಲ್ಲಿ ಆ ರೀತಿಯ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅವಧಿ ಪೂರ್ಣ ಬಳಿಕವೇ ರಾಜ್ಯ ವಿಧಾನ ಸಭೆ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಜನಪರ ಬಜೆಟ್ ಹಾಗೂ ಪ್ರಧಾನಿಗಳ ಜನಪರ ಕಾರ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಅದರಲ್ಲಿ ನಾವು ಯಶಸ್ವಿ ಕೂಡಾ ಕಾಣುತ್ತೇವೆ. ರಾಜ್ಯ ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ತೆಲಾಡುತ್ತಿದ್ದರು, ಆದರೆ ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ಮತದಾರ ತಕ್ಕ ಉತ್ತರ ನೀಡಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಜನತೆಯ ವಿಶ್ವಸದೊಂದಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button