ಹಿಜಾಬ್ ವಿವಾದ: ಬಹಿರಂಗ ಚರ್ಚೆ ಒಲ್ಲೆ ಎಂದು ಶಿವಕುಮಾರ್

ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ಕಾಲೇಜಿನಲ್ಲಿ ವಿವಾದಕ್ಕೆಡೆ ಮಾಡಿಕೊಟ್ಟಿರುವ ಹಿಜಾಬ್ ಪ್ರಕರಣ ಸಂಬಂಧ ಬಹಿರಂಗ ಚರ್ಚೆ ಅನಗತ್ಯ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರದೇ ಆದ ಜೀವನ ಪದ್ಧತಿ, ಸಂಸ್ಕೃತಿ ಇರುವುದನ್ನು ಚರ್ಚಿಸಬೇಕು ಎಂದರು.
ವಿವಾದ ಸಂಬಂಧ ಪಕ್ಷದ ಸ್ಥಳೀಯ ನಾಯಕರ ಜತೆ ಚರ್ಚಿಸಬೇಕಿದೆ. ಮೊದಲಿನಿಂದ ಆಚರಿಸಿಕೊಂಡು ಬಂದ ಪದ್ಧತಿ, ಸಂಸ್ಕೃತಿ, ಇತಿಹಾಸ, ಕಾನೂನು ಎಲ್ಲವನ್ನೂ ನೋಡಬೇಕಿದೆ ಎಂದೂ ಅವರು ಹೇಳಿದರು.
ಹಿಜಾಬ್ ವಿಚಾರವನ್ನು ಮೊದಲಿನಿಂದ ಗಮನಿಸುತ್ತಿದ್ದೇನೆ. ನ್ಯಾಯಾಲಯ ಈಗಾಗಲೇ ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷನಾಗಿ ಮಾತನಾಡುವುದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು.
ಅಭ್ಯರ್ಥಿಗಳ ಪಟ್ಟಿ ಶೀಘ್ರ
ವಿಧಾನ ಪರಿಷತ್ ಪದವೀಧರರು, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ಈಗಾಗಲೇ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಮಧು ಮಾದೇಗೌಡರು ಹಾಗೂ ಧಾರವಾಡದ ಗುರಿಕಾರ್ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ. ಬೆಳಗಾವಿ, ಬಾಗಲಕೋಟೆ, ಬಾದಾಮಿ, ಬಿಜಾಪುರದ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದ ತಲಾ ಒಬ್ಬರು ಅಭ್ಯರ್ಥಿ ಆಯ್ಕೆ ಸಂಬಂಧ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪದವೀಧರ ಕ್ಷೇತ್ರಕ್ಕೆ ಆರು ಮಂದಿ ಅರ್ಜಿ ಹಾಕಿದ್ದು, ಶಿಕ್ಷಕರ ಕ್ಷೇತ್ರಕ್ಕೆ 15ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿರುವ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯುವುದು ಮುಖ್ಯ. ಇಂದಿನ ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೆಲವು ನಾಯಕರು ಗೋವಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದು, ಮುಂದಿನ ಕೆಲ ದಿನಗಳಲ್ಲಿ ಅವರು ಬಂದ ನಂತರ ಚರ್ಚಿಸಿ, ನಮ್ಮ ಶಿಫಾರಸ್ಸನ್ನು ದೆಹಲಿಗೆ ಕಳುಹಿಸಿಕೊಡುತ್ತೇವೆ ಎಂದು ವಿವರಿಸಿದರು.
