Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಹಿಜಾಬ್ ವಿಚಾರ: ವಸ್ತ್ರಸಂಹಿತೆ ಆದೇಶದ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿದ್ದೇನು?

ಬೆಂಗಳೂರು: ಹಿಜಾಬ್-ಕೇಸರಿ ಶಾಲು ಪ್ರಕರಣ ಸಂಬಂಧ ಬುಧವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡದೇ ಕಾದು ನೋಡುವ ತಂತ್ರಕ್ಕೆ ಸರ್ಕಾರ ಮೊರೆ ಹೋಗಿದೆ. ಬುಧವಾರ ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಂಪುಟ ಸಭೆಯಲ್ಲಿ ವಿಷಯ ಚರ್ಚೆಯಾಗಿದೆ. ಆದರೆ ಇವತ್ತೇ ಹೈಕೋರ್ಟ್ ನಲ್ಲಿ ವಿಚಾರಣೆ ಇದ್ದುದ್ದರಿಂದ ಅದನ್ನು ನೋಡಿಕೊಂಡು ಸರ್ಕಾರದ ಮುಂದಿನ ಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎಂದರು.

ಸುಪ್ರೀಂಕೋರ್ಟ್, ಮಹಾರಾಷ್ಟ್ರ, ಕೇರಳ ಕೋರ್ಟ್ ಗಳ ತೀರ್ಮಾನಗಳನ್ನು ಆಧಾರವಾಗಿಟ್ಟು ಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಸಂಬಂಧ ಸರ್ಕಾರ ಆದೇಶ ಹೊರಡಿಸಿತು. ಆಗಲೂ ಹೈಕೋರ್ಟ್ ತೀರ್ಪನ್ನು ಸರ್ಕಾರ ಎದುರು ನೋಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಿಯಮಗಳ ಅನ್ವಯ ವಸ್ತ್ರಸಂಹಿತೆ ಜಾರಿಗೊಳಿಸಲಾಯಿತು ಎಂದರು.

ಸರ್ಕಾರಕ್ಕೆ ಗೊತ್ತಿರಲಿಲ್ಲ

ಶಾಲಾ ಉಸ್ತುವಾರಿ ಸಮಿತಿಗಳಿಗೆ(ಎಸ್ ಡಿಎಂ) ಅಧಿಕಾರ ನೀಡಲಾಗಿತ್ತು. ಒಂದೊಂದು ಶಾಲೆಯಲ್ಲಿ ಒಂದೊಂದು ಯೂನಿಫಾರಂಗಳನ್ನು ವಿದ್ಯಾರ್ಥಿಗಳು ಹಾಕಿಕೊಂಡು ಬರುತ್ತಿದ್ದರು. ಆದರೆ ದಿಢೀರ್ ಎಂದು ಹಿಜಾಬ್ ಪ್ರಕರಣ ಉದ್ಭವಿಸುತ್ತದೆ ಎಂದು ಸರ್ಕಾರಕ್ಕೆ ಗೊತ್ತಿರಲಿಲ್ಲ ಎಂದು ಹೇಳಿದರು.

ಅದಾದ ಮೇಲೆ ಸ್ಪಷ್ಟೀಕರಣ ನೀಡುವಾಗ ನಿಯಮದ ಪ್ರಕಾರ  ಆದೇಶ ಹೊರಡಿಸಲಾಗಿದೆ. ಆದರೆ, ಅದನ್ನು ಅರ್ಜಿದಾರರು ಕೋರ್ಟ್ ನಲ್ಲಿ ಪ್ರಶ್ನಿಸಿರುವುದರಿಂದ ಹೈಕೋರ್ಟ್ ಏನು ಹೇಳುತ್ತದೆ ಎಂದು ಕಾಯಲೇಬೇಕಿದೆ. ಕೋರ್ಟ್, ಸರ್ಕಾರ ಸರಿ ಎನ್ನುತ್ತದೋ, ಅರ್ಜಿದಾರರು ಸರಿ ಎನ್ನುತ್ತದೋ ಕಾದು ನೋಡಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ವಿವರಣೆ ನೀಡಿದರು.

ಸಂಪುಟ ಸಭೆ ತೀರ್ಮಾನಗಳು

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುವ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ ಅಂದಾಜು 560 ಕೋಟಿ ರೂಪಾಯಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಈ ಹಿಂದಿನ ಪ್ರಸ್ತಾವನೆಯಲ್ಲಿ ಹಲವು ಮಾರ್ಪಾಡುಗಳು ಮಾಡಿ, ಹೊಸ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲಾಗಿದೆ ಎಂದೂ ಅವರು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​ಸಿ) 2011ರ ಅಭ್ಯರ್ಥಿ ಆಯ್ಕೆ ಗೊಂದಲ ಸಂಬಂಧ ಮಸೂದೆ ಮಂಡನೆ ಮಾಡಲು ತೀರ್ಮಾನ. ಆಯೋಗ ನೋಟಿಫೈ ಮಾಡಿದ್ದ ಪಟ್ಟಿ ಒಪ್ಪಲು ಸಂಪುಟ ತೀರ್ಮಾನಿಸಿದೆ “ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ, 2022″ ಅನುಮೋದನೆ ನೀಡಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಿಡುಗುರ್ತಿ ಮತ್ತು ಇತರೆ 60 ಜನವಸತಿಗಳಿಗೆ ಜಲ ಜೀವನ ಮಿಷನ್‌ಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 131.21 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button