ಮಹಾರಾಷ್ಟ್ರದಲ್ಲಿ ವ್ಯಾಪಕ ನೆರೆ, ಭೂಕುಸಿತ; ನೂರಕ್ಕೂ ಹೆಚ್ಚು ಬಲಿ

ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟಕ್ಕೆ ಹಲವೆಡೆ ನೆರೆ ವ್ಯಾಪಿಸಿ, ಭೂಕುಸಿತ ಸಂಭವಿಸಿದೆ. ಮಳೆಯಿಂದ ಉಂಟಾದ ಹಲವು ಅವಘಡಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
‘ರಾಯಘಡ ಜಿಲ್ಲೆಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿ ಹೆಚ್ಚು ಜೀವಗಳು ಬಲಿಯಾಗಿವೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ. ಜೀವ ಕಳೆದುಕೊಂಡ ಸಂತ್ರಸ್ತ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ, ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ರಾಜ್ಯದ ವಿವಿಧೆಡೆ ಸಂಭವಿಸಿದ 11 ಭೂಕುಸಿತಗಳಲ್ಲಿ ಸಾವಿಗೀಡಾದ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರೂ.ಪರಿಹಾರ ಘೋಷಿಸಿದೆ.
ಅನೇಕ ಗ್ರಾಮಸ್ಥರಿಗೆ ಮೊದಲೇ ಸೂಚಿಸಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು, ಆದರೆ ಮತ್ತೆ ಅವರೆಲ್ಲಾ ಅದೇ ಸ್ಥಳಕ್ಕೆ ಹಿಂತಿರುಗಿ ಬಂದಾಗ ದುರಂತ ಸಂಭವಿಸಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ರಕ್ಷಣಾ ತಂಡದವರು ಸ್ಥಳಕ್ಕೆ ತಲುಪುವುದು ತಡವಾಗಿದ್ದರಿಂದ ಹಾಗೂ ಸರ್ಕಾರದಿಂದ ಜನರಿಗೆ ಮುನ್ನಚ್ಚರಿಕೆಯ ಮಾಹಿತಿ ನೀಡದ್ದರಿಂದ ಅವಘಡಗಳಿಗೆ ಬಲಿಯಾಗುವಂತಾಗಿದೆ ಎಂದು ವಿವಿಧ ಗ್ರಾಮಸ್ಥರು ದೂರಿದ್ದಾರೆ.
