ಪ್ರಧಾನಿ ರೈತರ ಕ್ಷಮೆ ಕೇಳಬೇಕಿತ್ತು: ಹೆಚ್ಡಿ ಕುಮಾರಸ್ವಾಮಿ

ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಕೇಂದ್ರದ ನಿರ್ಧಾರ ಪ್ರಾಮಾನಿಕವಾಗಿರಲಿ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಕೇವಲ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ ಎಂದು ಮಾಜಿ ಸಿಎಂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಾ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು ಎಂದಿದ್ದಾರೆ.
ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಕಡೆ ರೈತರ ವಿರುದ್ಧ ನಡೆದಿರುವ ದೌರ್ಜನ್ಯಕ್ಕೆ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕ್ಷಮೆ ಯಾಚನೆ ಮಾಡಬೇಕಿತ್ತು. ಈಗಲಾದರೂ ರೈತರ ಮೇಲೆ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ & ಈಗ ಏಕಾಎಕಿ ರದ್ದತಿ ಅನೇಕ ಪ್ರಶ್ನೆ ಹುಟ್ಟುಹಾಕಿದೆ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ & ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನಧಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದ್ದನ್ನು ಸ್ಮರಿಸಿದ್ದಾರೆ.
