ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ್ ಭಟ್ ಅವರಿಗೆ ಹರ್ಮನ್ ಮೊಗ್ಲಿಂಗ್ ಪುರಸ್ಕಾರ

ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕ ನೀಡುವ ಹರ್ಮನ್ ಮೊಗ್ಲಿಂಗ್ 2021ರ ರಾಜ್ಯ ಮಟ್ಟದ ಪುರಸ್ಕಾರಕ್ಕೆ ರಾಜ್ಯದ ಹೆಸರಾಂತ ಪತ್ರಕರ್ತ, ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ ಭಟ್ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿರುವ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಪ್ರತಿ ವರ್ಷದಂತೆ ಈ ಬಾರಿ ಪತ್ರಿಕಾ ದಿನಾಚರಣೆಯ ನಿಮಿತ್ತ ಕೊಡುವ ರಾಜ್ಯ ಮಟ್ಟದ ಹರ್ಮನ್ ಮೊಗ್ಲಿಂಗ್ ಪುರಸ್ಕಾರವನ್ನು ಹೆಸರಾಂತ ಪತ್ರಕರ್ತ, ಪ್ರಗತಿಪರ ಚಿಂತಕ ಶಶಿಧರ ಭಟ್ ಅವರಿಗೆ ನೀಡಲಾಗುವುದು. ಕೋವಿಡ್ ಕಾರಣಕ್ಕೆ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಶಶಿಧರ್ ಭಟ್ಟರು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಬಾಲಾಜಿ ಮೀಡಿಯಾ ಗ್ರೂಪ್ ಮಾಧ್ಯಮ ಸಲಹೆಗಾರರಾಗಿರುವ ಮುಖ್ಯಸ್ಥರಾಗಿರುವ ಅವರು ಕಳೆದ 35 ವರ್ಷಕ್ಕೂ ಅಧಿಕ ಕಾಲದಿಂದ ವಿವಿಧ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಶಶಿಧರ ಭಟ್ ಮಾಧ್ಯಮ ಮುಖೇನ ಸಮಾಜಕ್ಕೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲಿನ ದಿವಂಗತ ರಾಮನಾಥ್ ಶಾನಭಾಗ ಸಭಾಭವನದಲ್ಲಿ ಜುಲೈ,31 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ದಾಸನಕೂಡಿಗೆ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
