ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಬಗ್ಗೆ ಜೊತೆಗಿದ್ದ ವಿನಯ್ ಹೇಳಿದ್ದೇನು..?

ದಾವಣಗೆರೆ: ಉಕ್ರೇನ್ ನಲ್ಲಿ ಸಿಲುಕಿದ್ದ ದಾವಣಗೆರೆಯ ಮತ್ತೊಬ್ಬ ವಿದ್ಯಾರ್ಥಿ ಸುರಕ್ಷಿತವಾಗಿ ಮರಳಿದ್ದಾರೆ. ಇಂದು ಬೆಳಗ್ಗೆ ದಾವಣಗೆರೆಗೆ ಆಗಮಿಸಿದ ವಿನಯ್ ಉಕ್ರೇನ್ ನ ಕರ್ಕ್ಯೂನಲ್ಲಿ ಎಂಬಿಬಿಎಸ್ ಓದುತ್ತಿದ್ದರು.
ನಗರದ ಎಲ್ ಐಸಿ ಕಾಲೋನಿಯ ಪ್ರೊ.ರುದ್ರೇಶ್ ಎಂಬುವವರ ಪುತ್ರ ಈತ. ಮಗನ ಆಗಮನದಿಂದ ಸಂತೋಷಗೊಂಡ ಪೋಷಕರು ಸಿಹಿ ಹಂಚಿ ಸಂಭ್ರಮಿಸಿದರು. ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಹಲವು ಸಮಸ್ಯೆಗಳನ್ನು ಅನುಭವಿಸಿ ಕೊನೆಗೂ ಸುರಕ್ಷಿತವಾಗಿ ಮರಳಿರುವ ನವೀನ್ ಕೇಂದ್ರ ಸರ್ಕಾರ, ಸಂಸದ ಸಿದ್ದೇಶ್ವರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್ ನಲ್ಲಿ ಮೃತ ನವೀನ್ ಈಗ ಭಾರತಕ್ಕೆ ಬರಬೇಕಿತ್ತು. ನಾವು ಬರುವಾಗ ಆತನೇ ನಮಗೆ ಧೈರ್ಯ ಹೇಳಿ ಕಳಿಸಿದ್ದ. ಹುಷಾರಾಗಿ ತೆರಳುವಂತೆ ಬಾಗಿಲಿನವರೆಗೆ ಬಂದು ಬೀಳ್ಕೊಟ್ಟಿದ್ದ. ಆದರೆ ನಾನು ರೈಲು ಹತ್ತಿ ಒಂದು ಗಂಟೆಯೊಳಗೆ ಆತ ಮೃತಪಟ್ಟ ಸುದ್ದಿ ಬಂತು. ನನಗೆ ತೀವ್ರ ನೋವಾಯಿತು ಎಂದು ವಿನಯ್ ಸ್ನೇಹಿತನ ಸಾವಿಗೆ ಬೇಸರ ವ್ಯಕ್ತಪಡಿಸಿದರು.
ಉಕ್ರೇನ್ ನ ಖಾರ್ಕಿವ್ ನಿಂದ ವಾಪಸ್ ಆದ ವಿನಯ್ ಮಾಧ್ಯಮದವರ ಜೊತೆ ಮಾತನಾಡುತ್ತಾ ಭಾವುಕರಾದ ಅವರು, ಉಕ್ರೇನ್ ನಿಂದ ದಾವಣಗೆರೆಗೆ ಬೆಳಗ್ಗೆ ಬಂದು ನಿರಮ್ಮುಳರಾದರು.
ಖಾರ್ಕಿವ್ ನಲ್ಲಿ ಒಂದೇ ಹಾಸ್ಟೇಲ್ ವಿನಯ್ ಹಾಗೂ ನವೀನ್ ಇದ್ದರು. ಹಾಸ್ಟೆಲ್ ನಲ್ಲಿ ನವೀನ್ ಬಹಳ ಶಿಸ್ತಿನಿಂದ ಇರುತ್ತಿದ್ದ. ಬೆಳಗ್ಗೆ ನನ್ನನ್ನು ಕಳಿಸಿ ಬಳಿಕ ಆತ ಮಾರ್ಕೆಟ್ ಗೆ ಆಹಾರ ತರಲು ಹೋಗಿದ್ದ. ಈ ವೇಳೆ ನವೀನ್ ಮೃತಪಟ್ಟಿದ್ದಾನೆ. ಆದರೆ, ಆತನ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಶೆಲ್ ದಾಳಿ ಆಗಿದಿಯೋ ಅಥವಾ ಶೂಟ್ ಮಾಡಲಾಗಿದಿಯೋ ತಿಳಿಯುತ್ತಿಲ್ಲ. ನಮ್ಮನ್ನು ಸುರಕ್ಷಿತವಾಗಿ ಕಳಿಸಿಕೊಟ್ಟ ಆತನಿಗೆ ಹೀಗೆ ಆಗಬಾರದಿತ್ತು ಎಂದು ವಿನಯ್ ಕಲ್ಲಿಹಾಳ ನೋವು ತೋಡಿಕೊಂಡರು.
