ವಿರೋಧದ ನಡುವೆ ಮೇಲ್ಮನೆಯಲ್ಲೂ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರದ ರೂಪದಲ್ಲಿದ್ದ ಕರ್ನಾಟಕ ಗ್ರಾಮಸ್ವರಾಜ್ ಹಾಗೂ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಶುಕ್ರವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಭಾತ್ಯಾಗದ ನಡುವೆ ಅಂಗೀಕರಿಸಲಾಯಿತು.
ರಾಜ್ಯ ಚುನಾವಣಾ ಆಯೋಗದ ಬಳಿ ಇದ್ದ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ಮೀಸಲಾತಿ ನಿಗದಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯ ಅಧಿಕಾರವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ಈ ತಿದ್ದುಪಡಿ ವಿಧೇಯಕ ಕಸಿದುಕೊಂಡಿದೆ.
ಚುನಾವಣಾ ಆಯೋಗದ ಬದಲು ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಅಧಿಕಾರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರಲಿರುವ ಕ್ಷೇತ್ರ ಪುನರ್ ವಿಂಗಡಣೆ ಆಯೋಗಕ್ಕೆ ಅರ್ಥಾತ್ ಸರ್ಕಾರದ ಸುಪರ್ದಿಗೆ ಬರಲಿದೆ.
ಕೋರ್ಟ್ಗಳಲ್ಲಿ 2600 ತಕರಾರು ಅರ್ಜಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಮೇಲ್ಮನೆಯಲ್ಲಿ ವಿಧೇಯಕವನ್ನು ಮಂಡಿಸಿದರು.ನಂತರ ಪಂಚಾಯತ್ ರಾಜ್ ಕ್ಷೇತ್ರಗಳ ಪುನರ್ ವಿಂಗಡಣೆ ವಿರುದ್ಧ 2600ಕ್ಕೂ ಹೆಚ್ಚು ತಕರಾರು ಅರ್ಜಿಗಳು ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿವೆ. ಕ್ಷೇತ್ರ ಪುನರ್ ವಿಂಗಡಣೆ ಲೋಪ ಸರಿಪಡಿಸಲು ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದರು.
ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರಿಂದ ಪಕ್ಷಾತೀತ ಬೆಂಬಲ ಇದೆ. ಈ ವಿಚಾರವನ್ನು ಕೆಲವು ಶಾಸಕರು ಖಾಸಗಿಯಾಗಿ ತಮ್ಮ ಬಳಿ ಹಂಚಿಕೊಂಡಿದ್ದಾರೆ. ಪಕ್ಷಗಳ ನಿಲುವಿಗಾಗಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸದೇ ಎಲ್ಲರೂಐ ಸರ್ವಾನುಮತದಿಂದ ಈ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸೋಣ ಎಂದು ಸಚಿವ ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಅವರ ಈ ಮಾತಿಗೆ ತೀರ್ವ ಆಕ್ಷೇಪ ವ್ಯಕ್ತಪಡಿಸಿದ ಮೇಲ್ಮನೆಯಲ್ಲಿ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಹಾಗೂ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕರು ತಮ್ಮ ಬಳಿ ಖಾಸಗಿಯಾಗಿ ಮಾತನಾಡಿದ್ದರೆ ಅದನ್ನು ಸದನದಲ್ಲಿ ಬಹಿರಂಗಪಡಿಸಿ. ಈ ರೀತಿ ಮಾತನಾಡುವ ಮೂಲಕ ಸಚಿವರು ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಬಿಜೆಪಿಯ ಅನೇಕ ಶಾಸಕರೂ ತಮ್ಮ ಬಳಿ ಖಾಸಗಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಅದನ್ನೆಲ್ಲಾ ಶಾಸನ ಸಭೆಯಲ್ಲಿ ಹೇಳಲು ಸಾಧ್ಯವೇ ? ಎಂದು ಪ್ರಶ್ನಿಸಿದರು.
ನಮ್ಮ ಮಾತನ್ನು ಪರಿಗಣಿಸಿ ಸರ್ಕಾರ ವಿಧೇಯಕ ವಾಪಸು ಪಡೆಯುತ್ತದೆ ಎಂದು ಭಾವಿಸಿದೆವು. ಆದರೆ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಈ ಮೂಲಕ ವಿವಾದಾತ್ಮಕ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಮುಂದಾಗಿದೆ.ಇದು ಅಕ್ಷಮ್ಯ ಎಂದು ಕಾಂಗ್ರೆಸ್ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.
ಈ ವೇಳೆ ಜೆಡಿಎಸ್ ಸದಸ್ಯರೂ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಈ ನಡುವೆ ವಿಧೇಯಕ ಕುರಿತ ಚರ್ಚೆಯಲ್ಲಿ ಕೆಲ ಸದಸ್ಯರು ಪಾಲ್ಗೊಂಡಿದ್ದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
