ವೈದ್ಯರ ಸ್ವಾತಂತ್ರ್ಯಕ್ಕೆ ಕಡಿವಾಣ: ಆರೋಗ್ಯ ಇಲಾಖೆಯಿಂದ ವಿವಾದಾತ್ಮಕ ಆದೇಶ

ಬೆಂಗಳೂರು: ವೈದ್ಯರ ಸ್ವಾತಂತ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು ಮತ್ತು ವೈದ್ಯಕೀಯ ಪರಿಣಿತರ ವಿರುದ್ಧ ವಿವಾದಾತ್ಮಕ ಆದೇಶ ಹೊರಡಿಸಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಅಪೂರ್ಣ, ತಪ್ಪು ಮತ್ತು ಆಧಾರರಹಿತ ಮಾಹಿತಿಗಳನ್ನು ನೀಡುತ್ತಿರುವ ವೈದ್ಯಕೀಯ ಪರಿಣಿತರು, ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಸಿದೆ.
ವಾಸ್ತವಕ್ಕೆ ದೂರವಾದ ಮಾಹಿತಿ ವಿನಿಯಮ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿ, ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಮಿಕ ರೋಗಗಳ ಕಾಯ್ದೆ 2020ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಪ್ಪು ಮಾಹಿತಿಗಳು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುತ್ತಿದ್ದು, ಸಾರ್ವಜನಿಕರು ಮಾರ್ಗಸೂಚಿ ಪಾಲಿಸದೇ ವಿಮುಖರಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದೆ.
ಚಿಕಿತ್ಸೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ವೈದ್ಯರು, ಪರಿಣಿತರು, ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಎಚ್ಚರಿಕೆ ವಹಿಸುವುದು ಅಗತ್ಯ.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರಿಣಿತರು,ವೈದ್ಯರು ಯಾವುದೇ ಮಾಧ್ಯಮಗಳು, ಸಾಮಾಜಿಕ ವೇದಿಕೆಗಳ ಮೂಲಕ ಮಾಹಿತಿ ನೀಡುವ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿ, ಸುತ್ತೋಲೆ ಮತ್ತು ಆದೇಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಅಪೇಕ್ಷಣೀಯ ಎಂದು ಆದೇಶದಲ್ಲಿ ವಿವರಿಸಲಾಗಿದೆ.
