ಅಮೆಜಾನ್ ವಿರುದ್ಧ ಭ್ರಷ್ಟಾಚಾರ ಆರೋಪ; ತನಿಖೆಗೆ ಮುಂದಾದ ಸರ್ಕಾರ

ನವದೆಹಲಿ: ಅಮೆರಿಕಾದ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ತನಿಖೆಗೆ ಸರ್ಕಾರ ಮುಂದಾಗಿದೆ. ಈ ಮಧ್ಯೆ, ಆರೋಪ ಸಂಬಂಧ ಅಮೆಜಾನ್ ಕೂಡ ತನಿಖೆ ಆರಂಭಿಸಿದೆ ಎನ್ನಲಾಗಿದೆ.
ಅಮೆಜಾನ್ನ ಕಾನೂನು ಪ್ರತಿನಿಧಿಗಳು ಭಾರತದಲ್ಲಿನ ಅಧಿಕಾರಿಗೆ ಲಂಚ ನೀಡಿದ್ದಾರೆಂಬುದು ಆರೋಪ. ಆದರೆ ಯಾವಾಗ ಯಾವ ರಾಜ್ಯದಲ್ಲಿ ಇದು ನಡೆಯಿತೆಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಸರ್ಕಾರದ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಅಮೆಜಾನ್ ಕಾನೂನು ಶುಲ್ಕವೆಂದು 8,500 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಆದರೆ ಆ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಪತ್ತೆಹಚ್ಚಬೇಕಿದೆ. ಅಮೆಜಾನ್ನ ಇಡೀ ವ್ಯವಸ್ಥೆಯೇ ಲಂಚದ ಮೇಲೆ ನಡೆಯುತ್ತಿರುವಂತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆನ್ನಲಾಗಿದೆ.
ಇನ್ನೊಂದೆಡೆ, ಅಮೆಜಾನ್ ಕೂಡ ತನ್ನ ಕೆಲವು ಕಾನೂನು ಪ್ರತಿನಿಧಿಗಳ ವಿರುದ್ಧ ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿದುಬಂದಿದೆ. ಕಂಪನಿಯ ಹಿರಿಯ ಕಾರ್ಪೋರೇಟ್ ಸಲಹೆಗಾರನನ್ನು ರಜೆಯ ಮೇಲೆ ಕಳಿಸಿರುವುದಾಗಿ ವರದಿಯಾಗಿದೆ.
ಲಂಚ ಆರೋಪದ ಬಗ್ಗೆ ಖಚಿತಪಡಿಸದ ಆದರೆ ನಿರಾಕರಿಸದ ಅಮೆಜಾನ್, ಭ್ರಷ್ಟಾಚಾರ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಅಮೆಜಾನ್ ವಿರುದ್ಧ ಈಗಾಗಲೇ ಅನಾರೋಗ್ಯಕರ ಸ್ಪರ್ಧೆ ಸೇರಿದಂತೆ ಹಲವು ಆರೋಪಗಳಿದ್ದು, ಭಾರತದ ಸ್ಪರ್ಧಾ ಆಯೋಗದ ಪರಿಶೀಲನೆಯಲ್ಲಿದೆ. ಇತ್ತೀಚೆಗಷ್ಟೇ ಅದು, ಭಾರತದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ರಿಲಯನ್ಸ್ ಜೊತೆ ತನ್ನ ಪಾಲುದಾರ ಕಂಪನಿ ಫ್ಯೂಚರ್ ಗ್ರೂಪ್ ಮಾಡಿಕೊಂಡಿದ್ದ ಒಪ್ಪಂದದ ವಿರುದ್ಧ ಕಾನೂನು ಸಮರದಲ್ಲಿ ಗೆದ್ದಿತ್ತು.
