ಗೋವಾ: ವೋಟ್ ಗಳು ವಿಭಜನೆಯಾದಷ್ಟು ಬಿಜೆಪಿಗೆ ಲಾಭ…

ಜಿ.ಮುಮ್ತಾಜ್ ಅಲೀಮ್
ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ಗೋವಾ ಒಂದು ಪುಟ್ಟ ರಾಜ್ಯ. ಕೇಂದ್ರಾಡಳಿತ ಪ್ರದೇಶವಾದ ರಾಷ್ಟ್ರ ರಾಜಧಾನಿ ದೆಹಲಿಗಿಂತಲೂ ಅತ್ಯಂತ ಚಿಕ್ಕರಾಜ್ಯವಾಗಿರುವ ಗೋವಾ ಪೂರ್ಣ ಪ್ರಮಾಣದಲ್ಲಿ ರಾಜ್ಯದ ಸ್ಥಾನಮಾನವನ್ನು ಹೊಂದಿದೆ. ರಾಜ್ಯದಲ್ಲಿ 40 ವಿಧಾನಸಭೆ ಕ್ಷೇತ್ರಗಳಿದ್ದು, ಕೇವಲ ಎರಡು ಲೋಕಸಭೆ ಕ್ಷೇತ್ರಗಳು ಮಾತ್ರ ಇವೆ. ಗೋವಾ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಸರಿ ಸುಮಾರು 11 ಲಕ್ಷ ಮಾತ್ರ.
ಕಾಸ್ಮೋಪಾಲಿಟಿನ್ ಸಂಸ್ಕೃತಿ ಅಥವಾ ಸ್ವಭಾವದ ಗೋವಾ ದೇಶದ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕಿವಾಗಿ ಸಮೃದ್ಧವಾದ ರಾಜ್ಯ ಗೋವಾ. ಬ್ರಿಟಿಷರು ದೇಶ ಬಿಟ್ಟು ತೊಲಗಿದ ನಂತರ ಗೋವಾ ಮಾತ್ರ 1969ರವರೆಗೆ ಪೋರ್ಚುಗಿಸರ ಹಿಡಿತದಲ್ಲೇ ಇತ್ತು.
ಉತ್ತರ ಮತ್ತು ದಕ್ಷಿಣದ ರಾಜಕೀಯ
ಗೋವಾವನ್ನು ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂದು ಎರಡು ಭಾಗಗಳಲ್ಲಿ ವಿಂಗಡಿಸಿ ನೋಡಬಹುದಾಗಿದೆ. ಉತ್ತರ ಗೋವಾ ಮಹಾರಾಷ್ಟ್ರ ಮತ್ತು ದಕ್ಷಿಣ ಗೋವಾ ಕರ್ನಾಟಕವನ್ನು ಹೊಂದಿಕೊಂಡಿದೆ. 19 ವಿಧಾನಸಭೆ ಕ್ಷೇತ್ರಗಳಿರುವ ಉತ್ತರ ಗೋವಾದಲ್ಲಿ ಶೇ.76ರಷ್ಟು ಹಿಂದೂಗಳ ಜನಸಂಖ್ಯೆ ಇದ್ದರೆ, ಶೇ.16ರಷ್ಟು ಕ್ರೈಸ್ತ ಮತಾನುಯಾಯಿಗಳಿದ್ದಾರೆ. ಆದರೆ 21ಕ್ಷೇತ್ರಗಳ ದಕ್ಷಿಣ ಗೊವಾದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ.36 ರಷ್ಟಿದ್ದರೆ, ಉತ್ತರ ಗೋವಾಕ್ಕಿಂತ ಕಡಿಮೆ ಅಂದರೆ ಶೇ.53ರಷ್ಟು ಮಾತ್ರ ಹಿಂದೂಗಳಿದ್ದಾರೆ.
ಗಮನಾರ್ಹ ಸಂಗತಿ ಎಂದರೆ ಕಟ್ಟಾ ಹಿಂದೂವಾದಿ ಪಕ್ಷವಾದ ಬಿಜೆಪಿ ಗೋವಾದಲ್ಲಿ ಆಡಳಿತ ನಡೆಸುತ್ತಲಿದೆ ಮತ್ತು ಅದರ ಬತ್ತಳಿಕೆಯಲ್ಲಿ ಕ್ರೈಸ್ತ ಶಾಸಕರಿದ್ದಾರೆ. ಗಮನಿಸಬೇಕಾದ ಇನ್ನೊಂದು ವಿಷಯ ಗೋವಾದಂತಹ ಚಿಕ್ಕ ರಾಜ್ಯಗಳ ವಿಶೇಷವೆಂದರೆ ಇಲ್ಲಿ ಪಕ್ಷದ ಚಿಹ್ನೆ ಮೇಲೆ ಗೆಲ್ಲುವವರಿಗಿಂತ ವ್ಯಯಕ್ತಿಕ ವರ್ಚಸ್ಸಿನ ಮೇಲೆ ಅರ್ಭರ್ಥಿಗಳು ಹೆಚ್ಚಾಗಿ ಆಯ್ಕೆಯಾಗುತ್ತಾರೆ.
ಬಿಜೆಪಿ ಉತ್ಥಾನಕ್ಕೆ ಸೋಪಾನ
2012ಕ್ಕೂ ಮುನ್ನ ಬಿಜೆಪಿ ಚರ್ಚಿನ ಸಖ್ಯ ಬೆಳೆಸಿ ಒಂದು ರಾಜಕೀಯ ಒಡಂಬಡಿಕೆ ಮಾಡಿಕೊಂಡಿತು. ಪರಿಣಾಮವಾಗಿ ಮಾಜಿ ಸಿಎಂ ದಿವಂಗತ ಮನೋಹರ್ ಪಾರಿಕ್ಕರ್ ಕಾಲದಿಂದ ಗೋವಾ ನೆಲದಲ್ಲಿ ಬಿಜೆಪಿ ಇಮೇಜ್ ಬದಲಾಯಿತು. ಮೃದು ಹಿಂದುತ್ವ ನೀತಿ ಅದು ಅನುಸರಿಸತೊಡಗಿತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಂದರೆ ಪಾರಿಕ್ಕರ್ ನಂತರ ಪ್ರಮೋದ ಸಾವಂತ್ ಮುಖ್ಯಮಂತ್ರಿಯಾದ ಮೇಲೆ ಬಿಜೆಪಿ ಮತ್ತೆ ತನ್ನ ಕಟ್ಟರ್ ಹಿಂದೂತ್ವವಾದಿ ನೀತಿಯೆಡೆ ನಿಧಾನವಾಗಿ ವಾಲುತ್ತಿರುವ ಸಂಕೇತಗಳು ಗೋಚರವಾಗತೊಡಗಿವೆ.
ಗೋವಾ ರಾಜಕೀಯದಲ್ಲಿ ತನ್ನದೇ ಆದ ಹಿಡಿತ ಹೊಂದಿದ್ದ ಮನೋಹರ್ ಪಾರಿಕ್ಕರ್ ಅವರ ಪ್ರಯತ್ನಗಳ ಪರಿಣಾಮವಾಗಿ ಮೊದ ಮೊದಲು ಗೋವಾ ರಾಜ್ಯದ ಕಾಸ್ಮೋಪಾಲಿಟನ್ ಸ್ವಭಾವ ಗೋವಾ ಬಿಜೆಪಿಯಲ್ಲೂ ಪ್ರತಿಬಿಂಬಿಸತೊಡಗಿತ್ತು. ಅಂದರೆ ಬಿಜೆಪಿ ಕೂಡ ಇಲ್ಲಿ ತನ್ನನ್ನು ತಾನು ಬಹುಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದೆ ಎಂಬ ಭಾವ ಮೂಡಿಸತೊಡಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಗೋವಾದಲ್ಲಿ ಅನುಸರಿಸುತ್ತಿದ್ದ ಈ ರೂಪದಿಂದ ಇತ್ತೀಚಿನ ವರ್ಷಗಳಲ್ಲಿ ಹೊರ ಬಂದು ತನ್ನ ಮೂಲ ಸಿದ್ಧಾಂತವಾದ ಕಟ್ಟಾ ಹಿಂದುತ್ವವಾದಿ ಸಿದ್ದಾಂತದ ಕಡೆ ವಾಲತೊಡಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅವಲೋಕನ.
ಗೋಮಾಂಸದ ರಾಜಕೀಯ
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ದೇಶದಲ್ಲಿ ಗೋಮಾಂಸ ಸೇವನೆ ಒಂದು ದೊಡ್ಡ ವಿಷಯವಾಗಿ ಪರಿಣಮಿಸಿತು. ಗೋ ಮಾಂಸಕ್ಕೆ ಸಂಬಂಧಿಸಿದಂತೆ ಇಡಿ ರಾಷ್ಟ್ರದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಯಿತು. ಇಡಿ ದೇಶದಲ್ಲಿ ಗೋ ಮಾಂಸವನ್ನು ನಿಷೇಧಿಸುವ ಕೂಗು ಪ್ರಬಲವಾಯಿತು. ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಗುಂಪು ಹಲ್ಲೆಗಳು ನಡೆದವು. ಆದರೆ ಗೋವಾದಲ್ಲಿ ಮಾತ್ರ ಗೋ ಮಾಂಸವನ್ನು ನಿಷೇಧಿಸುವುದಿಲ್ಲ ಎಂದು ಬಿಜೆಪಿ ಘಂಟಾಘೋಷವಾಗಿ ಸಾರಿತು. ಮುಂದುವರಿದು ಗೋಮಾಂಸ ಗೋವಾದ ಸಂಸ್ಕೃತಿಯ ಒಂದು ಭಾಗ ಮತ್ತು ಅಲ್ಲಿ ಅದರ ಸೇವನೆ ಸಹಜ ಎಂದಿತು.
ಆದರೆ, ಗೋವಾದ ಹೊರಗೆ ದೇಶದಲ್ಲಿ ಗೋಮಾಂಸ ಸೇವನೆ ಒಂದು ಅಪಾಯಕಾರಿ ವಿಷಯವಾಗಿ ಪರಿಣಮಿಸಿತು. ಅದೇ ಗೋವಾದ ಒಳಗೆ ಮಾತ್ರ ಬಿಜೆಪಿ ಗೋಮಾಂಸ ಮತ್ತು ಗೋಮಾಂಸ ಸೇವನೆಯನ್ನು ತನ್ನ ರಾಜಕೀಯ ಉದ್ದೇಶದ ಈಡೇರಿಕೆಗಾಗಿ ಪ್ರಚಾರ (ಪ್ರಮೋಟ್) ಮಾಡತೊಡಗಿತು ಎಂಬುದೂ ಗಮನಾರ್ಹ.
ಕ್ರೈಸ್ತರಿಗೆ ವಿಜಯ
ಮತ್ತೊಂದು ವೈರುಧ್ಯ ಎಂದರೆ ದೇಶದಲ್ಲಿ ಅಲ್ಪಸಂಖ್ಯಾತ ವಿರೋಧಿ ಪಕ್ಷವಾಗಿ ಕಾಣುವ ಬಿಜೆಪಿ, 2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಯಿತು. ಅಚ್ಚರಿ ಎಂಬಂತೆ ಈ ಪೈಕಿ 7 ಸ್ಥಾನಗಳಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ ಕ್ರೈಸ್ತ ಅಭ್ಯರ್ಥಿಗಳು ವಿಜಯಿಯಾಗಿದ್ದರು.
ಕಾಂಗ್ರೆಸ್ಸಿಗೆ ಹಿನ್ನಡೆ
ಇದಕ್ಕೂ ಮುನ್ನ 2012 ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಗೋವಾದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷ ಎಂಜಿಪಿ 12 (ಶೇ.48), ಕಾಂಗ್ರೆಸ್ 5 (ಶೇ.38) ಹಾಗೂ ಇತರರು ಎರಡು (ಶೇ.16) ಸ್ಥಾನಗಳನ್ನು ಗಳಿಸಿದ್ದರು. ದಕ್ಷಿಣ ಗೋವಾದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷ ಎಂಜಿಪಿ 12 (ಶೇ.35.5) , ಕಾಂಗ್ರೆಸ್ 4 (ಶೇ.34) ಹಾಗೂ ಇತರರು 5 (ಶೇ.31) ಸ್ಥಾನಗಳನ್ನು ಗೆದ್ದಿದ್ದರು.
ಗೋವಾ ರಾಜಕೀಯದಲ್ಲಿ ಮೊದಲ ಬಾರಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಸ್ಥಾನಗಳಿಸಲು ಮಾಜಿ ಸಿಎಂ ಮನೋಹರ್ ಪಾರಿಕ್ಕರ್ ಅವರ ದೇಣಿಗೆ ಮತ್ತು ಬಿಜೆಪಿ ಅನುಸರಿಸಿದ ಸಾಮಾಜಿಕ ಮೈತ್ರಿ ಪ್ರಧಾನ ಕಾರಣ ಎಂಬುದನ್ನು ಮರೆಯುವಂತಿಲ್ಲ. ಗಮನಾರ್ಹ ಅಂಶ ಎಂದರೆ ಈ ವೇಳೆ, ಕಾಂಗ್ರೆಸ್ ಜತೆ ಎನ್ ಸಿ ಪಿ ಹೊಂದಾಣಿಕೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ 2012ರ ಚುನಾವಣೆಯಲ್ಲೂ ಸ್ಪರ್ಧಿಸಿತ್ತು ಮತ್ತು ಕೇವಲ ಶೇ.2ಕ್ಕಿಂತಲೂ ಕಡಿಮೆ ಮತ ಪಡೆದಿತ್ತು.
ಗೋವಾದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳ ಬದಲು ಪಕ್ಷೇತರ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡುವುದು ವಾಡಿಕೆಯಾಗಿ ಪರಿಣಮಿಸಿದೆ. ಈ ಕಾರಣದಿಂದಲೂ 2012ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಶೇ.31ರಷ್ಟು ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು.
ಒಟ್ಟಾರೆ ಗೋವಾದಲ್ಲಿ ಮೈತ್ರಿ ವಿಷಯದಲ್ಲಿ ಬಿಜೆಪಿ ಕರಾರುವಕ್ಕಾದ ನಿರ್ಧಾರ ತೆಗೆದುಕೊಂಡು ಪಕ್ಷದ ಅಥವಾ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಫಲವಾಗುತ್ತದೆ. ಆದರೆ, ಸುದೀರ್ಘವಾಗಿ ರಾಜ್ಯವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಮತ್ತಿತರ ವಿಷಯಗಳು ಪ್ರಮುಖ ಘಟ್ಟವಾದ 2012ರ ಚುನಾವಣೆಯಲ್ಲಿ ಮುಳುವಾಗಿ ಪರಿಣಮಿಸಿದ್ದವು.
ಆಡಳಿತಕ್ಕೆ ಬಂದ ಬಿಜೆಪಿ
ಇನ್ನು 2014 ಚುನಾವಣೆಯಲ್ಲಿ ಉತ್ತರಗೋವಾದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷ 18 (ಶೇ.57.5) ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ವಿಜಯ ಸಾಧಿಸಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು (ಶೇ.33) ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸಿತ್ತು. ಇನ್ನು ದಕ್ಷಿಣ ಗೋವಾದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷ 15 (ಶೇ.50) ಹಾಗೂ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಸಫಲವಾಗಿತ್ತು. ಈ ಚುನಾವಣೆಯಲ್ಲಿ ಲೋಕಸಭೆಯ ಎರಡೂ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು.
2017ರಲ್ಲಿ ಆಪರೇಷನ್ ಕಮಲ
2017ರಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗೆದ್ದು ಸರ್ಕಾರ ರಚಿಸಬೇಕಿತ್ತು. ಆದರೆ.13 ಸ್ಥಾನ ಗೆದ್ದಿದ್ದ ಬಿಜೆಪಿ ನಡೆಸಿದ ಆಪರೇಷನ್ ಕಮಲದ ಪರಿಣಾಮವಾಗಿ ಅಂತಿಮವಾಗಿ ಬಿಜೆಪಿ, ಎಂಜಿಪಿ, ಗೋವಾ ಫಾರ್ವಡ್ ಪಾರ್ಟಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು ಇತಿಹಾಸ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಂಜಿಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದವು ಎಂಬುದು ಗಮನಾರ್ಹ. 2017ರಲ್ಲಿ ಉತ್ತರ ಗೋವಾದಲ್ಲಿ ಶೇ.5.5ರಷ್ಟು ಮತ ಪಡೆದಿದ್ದ ಆಮ್ ಆದ್ಮಿ ಪಾರ್ಟಿ, ದಕ್ಷಿಣ ಗೋವಾದಲ್ಲಿ ಶೇ.7ರಷ್ಟು ಮತ ಪಡೆದಿತ್ತು ಆದರೆ ಯಾವುದೇ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು.
2019ರಲ್ಲಿ ಗೋವಾದ ಎರಡು ಲೋಕಸಭೆ ಕ್ಷೇತ್ರಗಳ ಪೈಕಿ ಉತ್ತರ ಗೋವಾ ಕ್ಷೇತ್ರವನ್ನು ಬಿಜೆಪಿ ಹಾಗೂ ದಕ್ಷಿಣ ಗೋವಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದವು. ವಿಧಾನಸಭೆ ಕ್ಷೇತ್ರಗಳ ಪೈಕಿ ಈ ಚುನಾವಣೆಯಲ್ಲಿ ಉತ್ತರ ಗೋವಾದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು 15 (ಶೇ.56.5), ಕಾಂಗ್ರೆಸ್ ಕೇವಲ 4 (ಶೇ.39), ದಕ್ಷಿಣ ಗೋವಾದಲ್ಲಿ ಬಿಜೆಪಿ 11 (ಶೆ.46.3) ಹಾಗೂ ಕಾಂಗ್ರೆಸ್ 10 (ಶೇ.46.5) ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಿಜೆಪಿ ಮತ್ತೊಮ್ಮೆ ಗೋವಾದಲ್ಲಿ ಆಡಳಿತರೂಢ ಪಕ್ಷವಾಗಿ ಹೊರಹೊಮ್ಮಿತು.
ಗಮನಿಸಬೇಕಾದ ವಿಷಯ ಎಂದರೆ ಹಿಂದೂಗಳ ಜನಸಂಖ್ಯೆ ಶೆ.76ರಷ್ಟಿರುವ ಉತ್ತರ ಗೋವಾದಲ್ಲಿ ಬಿಜೆಪಿ ಶೇ.40ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತಾ ಬಂದು ಉತ್ತರ ಗೋವಾವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ, ದಕ್ಷಿಣ ಗೋವಾ ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ಜಾತ್ಯಾತೀತ ಮತಗಳ ವಿಭಜನೆಯ ಗುಮ್ಮ ಅದನ್ನು ಕಾಡುತ್ತಿದೆ.
ಕಾಂಗ್ರೆಸ್ಸಿಗೆ ಮತ ವಿಭಜನೆ ಕಾಟ
ಪ್ರಸಕ್ತ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿದ್ದ ಪ್ರಭಾವಿ ನಾಯಕ, ಮಾಜಿ ಸಚಿವ ಮೈಕೆಲ್ ಲೋಬೋ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೈ ನಾಯಕರಿಗೆ ಬಲ ಬಂದಂತಾಗಿದೆ. ಕನಿಷ್ಠ ಐದಾರು ಕ್ಷೇತ್ರಗಳ ಮೇಲೆ ಇವರ ಪ್ರಭಾವವಿದೆ ಎನ್ನಲಾಗಿದೆ. ಮತ್ತೊಂದೆಡೆ ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಲಾಭ ತನಗೆ ದಕ್ಕಬಹುದು ಎಂಬುದು ಕಾಂಗ್ರೆಸ್ ಆಸೆಯಾಗಿದೆ.
ಆದಾಗ್ಯೂ ಪ್ರಸಕ್ತ ಗೋವಾ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಬಿಜೆಪಿ ಮುನ್ನಡೆಯಲ್ಲಿದೆ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಮತಗಳ ವಿಭಜನೆ ಇದಕ್ಕೆ ಮುಖ್ಯ ಕಾರಣ ಎಂದು ಗುರುತಿಸಲಾಗುತ್ತಿದೆ. ಎಂಜಿಪಿ ಮತ್ತು ಆಮ್ ಆದ್ಮಿ ಪಕ್ಷ ಈ ಚುನಾವಣೆಯಲ್ಲಿ ದೊಡ್ಡ ಪಾತ್ರವಹಿಸಬಹುದು. ಆದರೆ, ತೃಣ ಮೂಲ ಕಾಂಗ್ರೆಸ್ ಪಾತ್ರ ಗೌಣ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತೀಯ ರಾಜಕಾರಣದ ಇತ್ತೀಚಿನ ಟ್ರೆಂಡ್ ಪ್ರಕಾರ ಜನತೆ ಹೆಚ್ಚಾಗಿ ಆಡಳಿತ ಪಕ್ಷಕ್ಕಿಂತ ವಿಪಕ್ಷಗಳತ್ತ ಗಮನ ಕೇಂದ್ರಕರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗತೊಡಗಿದೆ. ಗೋವಾ ಚುನಾವಣೆಯಲ್ಲಿ ಈ ರೀತಿಯ ಚಮತ್ಕಾರ ಕೆಲಸ ಮಾಡಿದರೆ ಗೋವಾ ಮಟ್ಟಿಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಒಟ್ಟಾರೆ ಸದ್ಯದ ಪರಿಸ್ಥಿತಿಯಲ್ಲಿ ಗೋವಾದಲ್ಲಿ ಮತಗಳು ವಿಭಜನೆಯಾಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರವಾಗತೊಡಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮತಗಳು ವಿಭಜನೆಯಾದಷ್ಟು ಬಿಜೆಪಿಗೆ ಲಾಭ ಎಂಬುದನ್ನು ಸದ್ಯದ ಗೋವಾದ ರಾಜಕೀಯ ಚಿತ್ರಣ ಸಾರಿ ಸಾರಿ ಹೇಳುತ್ತಿದೆ.
