ನವಾಜ್ ಷರೀಫ್, ಮೋದಿ ನೇಪಾಳದಲ್ಲಿ ರಹಸ್ಯ ಭೇಟಿ: ಇಮ್ರಾನ್ ಖಾನ್

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ್ ನ ಮಾಜಿ ಪ್ರಧಾನಿ ನವಾಜ್ ಷರೀಫ್ ನೇಪಾಳದಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಜೆಗಳನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಹೇಳಿದ್ದಾರೆ.
ವಿದೇಶಿ ಶಕ್ತಿಗಳೊಂದಿಗೆ ಇಲ್ಲಿ ಮೂರು ಕೈಗೊಂಬೆಗಳು ಕಾರ್ಯಾಚರಿಸುತ್ತಿವೆ ಎಂದು ದೇಶದೊಳಗಿನ ಪಿತೂರಿಯ ಬಗ್ಗೆ ತಿಳಿದಿರುವುದಾಗಿ ಇಮ್ರಾನ್ ಖಾನ್ ಸುಳಿವು ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಯ ಬಗ್ಗೆ ಸ್ಪಷ್ಟ ಪಡಿಸಿರುವ ಅವರು, ಕೆಲವರು ನನಗೆ ರಾಜೀನಾಮೆ ನೀಡುವಂತೆ ಹೇಳಿದ್ದಾರೆ. ನಾನೇಕೆ ರಾಜೀನಾಮೆ ನೀಡಬೇಕು? ನಾನು ಸಾಕಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಿರುವೆ. ಎಲ್ಲರಿಗೂ ತಿಳಿದಿದೆ, ನಾನು ಕೊನೆಯ ಎಸೆತದವರೆಗೂ ಹೋರಾಡುವೆ ಎಂದಿದ್ದಾರೆ.
ಇನ್ನು, ಈ ಭಾಷಣ ನೇರ ಪ್ರಸಾರವಾಗಿದ್ದು, ಮೊದಲೇ ರೆಕಾರ್ಡ್ ಮಾಡಿಲ್ಲ ಎಂದಿರುವ ಇಮ್ರಾನ್ ಖಾನ್, ನಾನು ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದು, ಅವನಿಗೆ ನಾನು ಕೃತಜ್ಞನಾಗಿದ್ದೇನೆ. ಸ್ವಾಭಿಮಾನವು ಸ್ವತಂತ್ರ ರಾಷ್ಟ್ರದ ಸಂಕೇತವಾಗಿದ್ದು, ಪಾಕಿಸ್ತಾನ ನನಗಿಂತ ಕೇವಲ ಐದು ವರ್ಷ ದೊಡ್ಡದು. ಸ್ವಾತಂತ್ರ್ಯದ ಬಳಿಕ ಹುಟ್ಟಿದ ದೇಶದ ಮೊದಲ ತಲೆಮಾರಿನವನು ನಾನು ಎಂದಿದ್ದಾರೆ.
ಈ ಹಿಂದೆ ಇತರ ದೇಶಗಳು ನಮ್ಮನ್ನು ನೋಡಿ ಕಲಿಯುತ್ತಿದ್ದ ಕಾಲವಿತ್ತು. ಆದರೆ, ಈಗ ಪಾಕಿಸ್ತಾನವನ್ನು ಅವಮಾನಿಸುತ್ತಿರುವುದನ್ನು ನಾನು ನೋಡಿದ್ದೇನೆ. ನಾನು ರಾಜಕೀಯ ಪ್ರವೇಶಿಸಿದ ಸಂದರ್ಭದಲ್ಲಿ ಯಾರಿಗೂ ತಲೆಬಾಗುವುದಿಲ್ಲ ಮತ್ತು ಪಾಕಿಸ್ತಾನವನ್ನು ತಲೆಬಾಗಲು ಬಿಡುವುದಿಲ್ಲ ಎಂದಿರುವ ಇಮ್ರಾನ್ ಖಾನ್ ನನ್ನ ಗುರಿ ನ್ಯಾಯ, ಮಾನವೀಯತೆ ಮತ್ತು ಸ್ವಾಭಿಮಾನ ಎಂದು ಭಾಷಣದಲ್ಲಿ ಹೇಳಿದ್ದಾರೆ.
