ಕೋಲಿ ಸಮುದಾಯ ಎಸ್ಟಿ ಸೇರ್ಪಡೆ ಮಾಡಿದ ಸಚಿವರ ಕಾರ್ಯ ಶ್ಲಾಘನೀಯ: ಮಾಲೀಕಯ್ಯ ಗುತ್ತೆದಾರ್

ಕಲಬುರಗಿ: ಸಚಿವ ಸ್ಥಾನ ಕಳೆದುಕೊಳ್ಳುವ ಎಚ್ಚರಿಕೆ ಜೊತೆಗೆ ಸಾಕಷ್ಟು ಒತ್ತಡ ಹಾಕಿದರೂ ಮನಿಯದೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿರುವದು ಹರ್ಷದಾಯಕ ವಿಷಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೆದಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಮತ್ತು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಕೋಲಿ ಹಾಗೂ ಪರ್ಯಾಯ ಪದವುಳ್ಳ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬರವಸೆ ನೀಡಿದ್ದೇವು. ಅದರಂತೆ ಸರ್ಕಾರದ ಗಮನಕ್ಕೆ ತಂದಾಗ ಜನರಿಗೆ ನಾವು ನೀಡಿದ ಭರವಸೆಯಂತೆ ಸರ್ಕಾರ ಕಾರ್ಯಕೈಗೊಂಡಿದೆ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮೇಲೆ ಇತರೆ ಸಮುದಾಯದಿಂದ ಒತ್ತಡವಿತ್ತು. ಕೊಲಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬಾರದು, ದಿಟ್ಟ ನಿರ್ಧಾರಕ್ಕೆ ಮುಂದಾದ್ರೆ ನಿಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳತ್ತೀರಾ ಅಂತ ಎಚ್ಚರಿಕೆ ಕೂಡಾ ನೀಡಿದರು.
ಸಾಕಷ್ಟು ಒತ್ತಡ, ಎಚ್ಚರಿಕೆ ಇದ್ದರೂ ಯಾವುದಕ್ಕೂ ಕಿವಿಗೊಡದೆ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಈ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಿರುವ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಕಾರ್ಯ ಸ್ವಾಗತಾರ್ಹ. ಎಸ್ಟಿ ಪ್ರಮಾಣ ಪತ್ರದ ಕಡತವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿ ಅದನ್ನು ಮುಖ್ಯಮಂತ್ರಿಗಳು ಅನುಮೋದನೆ ನೀಡಿ ಈ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಸಚಿವರ ಹಾಗೂ ಸರ್ಕಾರದ ಕಾರ್ಯ ಶ್ಲ್ಯಾಘನೀಯವಾದದ್ದು ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
