ಹಿಂದುಳಿದ ಶ್ರೀಗಳ ಒಕ್ಕೂಟಕ್ಕೆ ಜಮೀನು ಬಗ್ಗೆ ಪರಿಶೀಲನೆ: ಸಿಎಂ

ಬೆಂಗಳೂರು: ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದ ಶ್ರೀಗಳ ನಿಯೋಗ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಹಿಂದುಳಿದ ವರ್ಗ ಮತ್ತು ದಲಿತ ಮಠಗಳ ಶ್ರೇಯೋಭಿವೃದ್ಧಿ ಕುರಿತು ಚರ್ಚೆ ನಡೆಸಿತು.
ಸ್ವಾಮೀಜಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಂದುಳಿದವರು ಮತ್ತು ದಲಿತ ವರ್ಗದ ಏಳಿಗೆಗಾಗಿ ಬರುವ ಬಜೆಟ್ ನಲ್ಲಿ ಆದ್ಯತೆ ನೀಡಿ ಹೆಚ್ಚಿನ ಅನುದಾನ ಒದಗಿಸಬೇಕು. ಸಮುದಾಯದ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಮತ್ತು ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದೆ ಎಂದರು.
ಒಕ್ಕೂಟದ ಮೂಲಕ ಹಲವಾರು ಹೋರಾಟಗಳನ್ನು ಹಮ್ಮಿಕೊಂಡಿದ್ದು, ನಮ್ಮ ಆಶೋತ್ತರಗಳು ಈಡೇರಿಲ್ಲ ಎಂದು ಸಮುದಾಯಗಳ ಕಳಕಳಿಯಿಂದ ಹಲವು ವಿಚಾರಗಳನ್ನು ಚರ್ಚಿಸಿ ಗಮನಕ್ಕೆ ತಂದಿದ್ದಾರೆ. ಜತೆಗೆ ಮಠದಲ್ಲಿ ಅನ್ನದಾಸೋಹ, ವಿದ್ಯಾ ದಾಸೋಹ, ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ ಮತ್ತಿತರ ಮಠದ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ತಿಳಿಸಿದ್ದಾರೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಚಟುವಟಿಕೆ ಮಾಡಲು ಜಾಗಕ್ಕೆ ಮನವಿ ಮಾಡಿದ್ದಾರೆ. ಹಿಂದಿನ ಸರ್ಕಾರ ಬೇಡಿಕೆ ಈಡೇರಿಸಿತ್ತು. ಕಾನೂನಿನ ಗೊಂದಲ, ಹೈಕೋರ್ಟ್ ಕೇಸ್. ಐದಾರು ವರ್ಷ ಆದರೂ ದಕ್ಕಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರ ಸಕರಾತ್ಮಕವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ , ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಇತರರು ಇದ್ದರು.
