Oscar Fernades: ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ನಿಧನ

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫರ್ನಾಂಡೀಸ್ (80 ವರ್ಷ ) ಅವರು ನಿಧನರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯೆಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫರ್ನಾಂಡಿಸ್ ಇಂದು ಕೊನೆಯುಸಿರೆಳೆದಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರು ಮನೆಯಲ್ಲಿ ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದು ಮೆದುಳಿಗೆ ಪೆಟ್ಟಾಗಿತ್ತು. ಅವರನ್ನ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆಸ್ಕರ್ ಅವರಿಗೆ ಪತ್ನಿ ಬ್ಲಾಸಮ್ ಮಥಾಯಿಸ್ ಪ್ರಭು ಹಾಗೂ ಒಬ್ಬ ಪುತ್ರ, ಒಬ್ಬಳು ಮಗಳು ಇದ್ದಾರೆ.
ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಆಪ್ತರಾಗಿದ್ದ ಆಸ್ಕರ್, ರಾಜೀವ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅತ್ಯಾಪ್ತರಾಗಿದ್ದ ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಕಾಗ್ರೆಸ್ ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಆಸ್ಕರ್ ಸಲಹೆಗಳು ಪ್ರಮುಖ ಪಾತ್ರವಹಿಸುತ್ತಿದ್ದವು.
ಆಸ್ಕರ್ ಫರ್ನಾಂಡಿಸ್ ಅವರು ಮಾರ್ಚ್ 27, 1941ರಲ್ಲಿ ಉಡುಪಿಯಲ್ಲಿ ಜನಿಸಿದ್ದರು. ಜನವರಿ 18, 1980ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಐಕೆಯಾಗಿದ್ದರು. ಬಳಿಕ 17 ಜೂನ್ 2013ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿದ್ದರು. ಒಟ್ಟು ಐದು ಬಾರಿ ಉಡುಪಿಯಿಂದ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ. ಬಳಿಕ 2004ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು
ಆಸ್ಕರ್ ಫರ್ನಾಂಡಿಸ್ ಉಡುಪಿ ಲೋಕಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದರು. ಎರಡು ಭಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಕೇಂದ್ರ ಸಾರಿಗೆ, ಅಂಕಿ ಅಂಶ, ಯುವಜನ ಮತ್ತು ಕ್ರೀಡೆ, ಕಾರ್ಮಿಕ ಖಾತೆ, ಅನಿವಾಸಿ ಭಾರತೀಯರ ಸಚಿವಾಲಯಗಳ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
