ಕೊಡಗು ಬಿಟ್ಟು ರಾಜ್ಯಾದ್ಯಂತ ಅನ್ಲಾಕ್; ಮಾಲ್, ಮೆಟ್ರೋ, ಸಾರಿಗೆಗೆ ಸಂಪೂರ್ಣ ಅವಕಾಶ; ಥಿಯೇಟರ್ಗಿಲ್ಲ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲೆಡೆ ಅನ್ಲಾಕ್ 3.0 ಘೋಷಿಸಲಾಗಿದೆ.
ಸಚಿವರು ಮತ್ತು ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅನ್ಲಾಕ್ 3.0 ಮಾರ್ಗಸೂಚಿ ಪ್ರಕಟಿಸಿದ್ದಾರೆ. ಜುಲೈ 5ರಿಂದ ಜುಲೈ 19ರವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ವಾರಾಂತ್ಯ ಕರ್ಫ್ಯೂ ಅಂತ್ಯಗೊಳಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕೈಗಾರಿಕೆಗಳಲ್ಲಿ ಶೇ. 100 ಸಾಮರ್ಥ್ಯದೊಂದಿಗೆ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಮಾಲ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಸಂಪೂರ್ಣ ಅವಕಾಶ ಕೊಡಲಾಗಿದೆ. ಬಾರ್ಗಳಲ್ಲಿ ರಾತ್ರಿ 9ರವರೆಗೂ ಕುಳಿತು ಮದ್ಯಸೇವನೆಗೆ ಅವಕಾಶ ಒದಗಿಸಲಾಗಿದೆ. ಆದರೆ ಪಬ್ಗಳಿಗೆ ಅವಕಾಶ ನೀಡಿಲ್ಲ. ಹಾಗೆಯೇ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕಿಲ್ಲ.
ದೇವಸ್ಥಾನ, ಚರ್ಚೆ್, ಮಸೀದಿಗಳಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿದೆ. ಮದುವೆ ಮತ್ತಿತರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ 100 ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ಸಿಕ್ಕಿದೆ. ಕ್ರೀಡಾಪಟುಗಳಿಗೆ ಈಜುಕೊಳ, ಕ್ರೀಡಾ ಸಂಕೀರ್ಣಗಳಲ್ಲಿ ಅಭ್ಯಾಸಕ್ಕೆ ಅನುಮತಿ ಕೊಡಲಾಗಿದೆ.
ಸಭೆ, ಸಮಾರಂಭ, ಪ್ರತಿಭಟನೆಗಳಿಗೆ ಅವಕಾಶ ನೀಡಿಲ್ಲ. ಶಾಲೆ, ಕಾಲೇಜುಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದೆಂದು ಸಿಎಂ ಹೇಳಿದ್ದಾರೆ.
ರಾತ್ರಿ ಕರ್ಫ್ಯೂ ಮಾತ್ರ ಮುಂದುವರಿಯಲಿದ್ದು, ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಸಮಯ ನಿಗದಿಗೊಳಿಸಲಾಗಿದೆ.
ಜಿಲ್ಲೆಗಳಲ್ಲಿ ಅಗತ್ಯವಿದ್ದರೆ ಆಯಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ನಿರ್ಬಂಧ ಹೇರಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.
