Breaking NewsLatestಮಂಡ್ಯರಾಜ್ಯ

ಮಾಜಿ ಸಂಸದ ಜಿ ಮಾದೇಗೌಡ ನಿಧನ

ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆ ಕಂಡ ಹಿರಿಯ ರಾಜಕೀಯ ಮುತ್ಸದ್ಧಿ, ಅಪ್ರತಿಮ ಹೋರಾಟಗಾರ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಡಾ.ಜಿ.ಮಾದೇಗೌಡ (94) ವಿಧಿವಶರಾಗಿದ್ದಾರೆ. ಮಾದೇಗೌಡರು ವಯೋಸಹಜ ಹಾಗೂ ಶ್ವಾಸಕೋಶ ಸೋಂಕಿನ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಇದೇ ತಿಂಗಳ 4ರಂದು ದಾಖಲಾಗಿದ್ದ ಗೌಡರನ್ನು ಮೂರ್‍ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೌಡರು, ಕಳೆದ ಜುಲೈ ೧೦ರಂದು ೯೪ನೇ ವಸಂತಕ್ಕೆ ಕಾಲಿಟ್ಟಿದ್ದರು. ಬಳಿಕ ಚೇತರಿಕೆ ಕಂಡರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಮಾದೇಗೌಡರು ಪತ್ನಿ ಪದ್ಮಾ, ಪುತ್ರರಾದ ವಿಧಾನಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಡಾ.ಪ್ರಕಾಶ್, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ, ಅಪಾರ ಬಂಧು, ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಶನಿವಾರ ರಾತ್ರಿ 7.49ರ ಸಮಯದಲ್ಲಿ ಕೊನೆಯುಸಿರೆಳೆದ ಮಾದೇಗೌಡರ ಅಂತ್ಯಕ್ರಿಯೆ ಭಾನುವಾರ ಕೆ.ಎಂ.ದೊಡ್ಡಿ ಸಮೀಪದ ಹನುಮಂತ ನಗರದಲ್ಲಿರುವ ಜಿ.ಮಾದೇಗೌಡರ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿದೆ. ಶನಿವಾರ ರಾತ್ರಿಯೇ ಗೌಡರ ಪಾರ್ಥೀವ ಶರೀರವನ್ನು ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ನಿವಾಸಕ್ಕೆ ತರಲಾಯಿತು.

ಮಂಡ್ಯ ನಗರದ ಗೌಡರ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ೧೦ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ, ಗೌಡರು ವಿಶೇಷವಾಗಿ ಇಷ್ಟಪಡುತ್ತಿದ್ದ ಮಂಡ್ಯ ನಗರದ ವಿ.ವಿ.ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಅರ್ಧ ನಿಮಿಷಗಳ ಕಾಲ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಅಲ್ಲಿಂದ ಬೂದನೂರು, ಗೆಜ್ಜಲಗೆರೆ ಮಾರ್ಗವಾಗಿ ಮದ್ದೂರಿನಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯ್ತು. ನಂತರ ಮಾದೇಗೌಡರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನ ಮುಗಿಸಿ ಕೆ.ಎಂ. ದೊಡ್ಡಿಗೆ ಪಾರ್ಥೀವ ಶರೀರ ಕೊಂಡೊಯ್ಯಲಾಯ್ತು. ನಂತರ ಹನುಮಂತನಗರದ ಗೌಡರ ಶಿಕ್ಷಣ ಸಂಸ್ಥೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮದ್ಯಾಹ್ನ 2.30 ರಿಂದ 3 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಇನ್ನು ಗೌಡರ ಅಂತಿಮ ದರ್ಶನ ಪಡೆಯಲು ಸಂಸದೆ ಸುಮಲತಾ ಅಂಬರೀಷ್, ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಹೆಚ್.ಡಿ.ಚೌಡಯ್ಯ, ಹೆಚ್.ಬಿ.ರಾಮು, ಜಿ.ಬಿ.ಶಿವಕುಮಾರ್, ಮುಖಂಡರಾದ ಗಣಿಗ ರವಿಕುಮಾರ್, ಕೀಲಾರ ರಾಧಾಕೃಷ್ಣ, ಅಮರಾವತಿ ಚಂದ್ರಶೇಖರ್, ಮೀರಾ ಶಿವಲಿಂಗಯ್ಯ, ಬಿ.ಶಿವಲಿಂಗಯ್ಯ ಸೇರಿದಂತೆ ಅನೇಕರು ಆಗಮಿಸಿದ್ದರು. 

ಇನ್ನು ಮಾದೇಗೌಡರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ, ಸಚಿವರಾದ ಕೆ.ಸಿ.ನಾರಾಯಣಗೌಡ, ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಸಿ.ಪಿ.ಯೋಗೀಶ್ವರ್, ಸಂಸದೆ ಸುಮಲತಾ ಅಂಬರೀಷ್, ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Spread the love

Related Articles

Leave a Reply

Your email address will not be published. Required fields are marked *

Back to top button