ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಓಡಾಟಕ್ಕೆ ಬ್ರೇಕ್ : ಮೆಟ್ರೋ ಸಂಚಾರಕ್ಕಿಲ್ಲ ಅಡ್ಡಿ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ತಡೆಗಾಗಿ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ರಸ್ತೆಗಿಳಿಯಲ್ಲ. ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ ಅಗತ್ಯ ಸೇವೆಗಳಿಗೆ ಮಾತ್ರ ಬಸ್ ಸಂಚಾರ ಇರುತ್ತದೆ.
ಕೆಎಸ್ ಆರ್ ಟಿಸಿ ಬಸ್ ಸಂಚಾರ ಯಥಾಸ್ಥಿತಿ :
ಇನ್ನು ವೀಕೆಂಡ್ ಕರ್ಫ್ಯೂ ವೇಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಯಥಾಸ್ಥಿತಿ ಇರಲಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಾಡಲಿದ್ದು, ರಾಜ್ಯ ಹೊರ ರಾಜ್ಯಗಳ ನಡುವೆ ಬಸ್ ಸಂಚಾರವೂ ಇರಲಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ವರದಿ ಕಡ್ಡಾಯ ಮಾಡಲಾಗಿದೆ.
ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ:
ವೀಕೆಂಡ್ ಕರ್ಫ್ಯೂ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ.
ಮೆಟ್ರೋ ರೈಲಿನಲ್ಲಿ ಸದ್ಯ 1800-1900 ಜನ ಪ್ರಯಾಣಿಸುತ್ತಿದ್ದಾರೆ. ಕೊವಿಡ್ ಹೆಚ್ಚಳ ಹಿನ್ನೆಲೆ 800-900 ಜನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನಮ್ಮ ಮೆಟ್ರೋ ಸಂಚಾರದ ಅವಧಿ ಕಡಿತಗೊಳಿಸಿ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ. ಪ್ರಸ್ತುತ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸುತ್ತಿದೆ. ವೀಕೆಂಡ್ ಕರ್ಫ್ಯೂ ವೇಳೆ 30 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
