“ಪುನೀತ್ ಆನಂದಗೂಡಿನ” ಸ್ಪೆಷಾಲಿಟಿ ಏನು ಗೊತ್ತಾ…?

ದಾವಣಗೆರೆ: ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಇಂದು. ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಪಕ್ಕದ ಪಾರ್ಕ್ ನಲ್ಲಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು. ಇದು ಸ್ಪೆಷಲ್ ಆಗಿ ರೂಪಿಸಲಾಗಿರುವ ಪ್ರತಿಮೆ.
ಅಖಿಲ ಭಾರತ ವೀರಶೈವ ಸಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ವರನಟ ಡಾ. ರಾಜಕುಮಾರ್ ಕುಟುಂಬಕ್ಕೆ ಮೊದಲಿನಿಂದಲೂ ನಂಟು. ಪುನೀತ್ ರಾಜಕುಮಾರ್ ಜೊತೆಗೂ ಶಾಮನೂರು ಶಿವಶಂಕರಪ್ಪರಿಗೆ ಮೊದಲಿನಿಂದಲೂ ಒಡನಾಟ ಇತ್ತು. ಪುಟ್ಟಮಗುವಿದ್ದಾಗಿನಿಂದಲೂ ನೋಡಿದ್ದರು. ಇನ್ನು ಪುನೀತ್ ಅಂದ್ರೆ ಶಾಮನೂರು ಶಿವಶಂಕರಪ್ಪ ಅವರಿಗೆ ಅಚ್ಚುಮೆಚ್ಚು. ಹಾಗಾಗಿ ಅಪ್ಪು ಬಗ್ಗೆ ವಿಶೇಷ ಅಭಿಮಾನ ಅವರಿಗೆ.
ಎಂಸಿಸಿ ಬಿ ಬ್ಲಾಕ್ ನಲ್ಲಿಯೇ ಶಾಮನೂರು ಶಿವಶಂಕರಪ್ಪರ ನಿವಾಸ ಇದೆ. ಇದೇ ವಾರ್ಡ್ ನಲ್ಲಿ ಬರುವ ಈಜುಕೊಳ ಪಕ್ಕದಲ್ಲಿನ ಪಾರ್ಕ್‌ನಲ್ಲಿ ” ಪುನೀತ ಆನಂದಗೂಡು” ಎಂಬ ಹೆಸರನ್ನಿಟ್ಟು ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿದೆ. ಈ ಪ್ರತಿಮೆಯನ್ನು ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಅನಾವರಣಗೊಳಿಸಿದರು.
ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದಲ್ಲಿನ ಪಾರಿವಾಳ ಕುಳಿತ ಫೋಟೋದಲ್ಲಿರುವಂತೆ ನಿರ್ಮಾಣ ಮಾಡಲಾಗಿದೆ. ಈ ಪುತ್ಥಳಿ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುವಂತಿದೆ. ಇನ್ನು ಈ ಪ್ರತಿಮೆ ಎದುರು ಅಪ್ಪು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಹಿರಿಯರೂ ಸಹ ಹಿಂದೆ ಬೀಳಲಿಲ್ಲ.
ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಈ ವಾರ್ಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ ಮಾತ್ರವಲ್ಲ, ದೇಶ ವಿದೇಶದಲ್ಲಿಯೂ ಅಭಿಮಾನಿ ಬಳಗ ದೊಡ್ಡದಿದೆ. ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪಿಸಲು ಪ್ರಮುಖ ಕಾರಣ. ಈ ವಾರ್ಡ್ ನಲ್ಲಿ ನಿರ್ಮಾಣ ಮಾಡಿರುವುದರಿಂದ ಇಲ್ಲಿಗೆ ಬರುವ ವಾಯುವಿಹಾರಿಗಳು, ಜನರು, ಪುಟ್ಟ ಮಕ್ಕಳು ಅಪ್ಪು ಅವರನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಸದುದ್ದೇಶದಿಂದ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ. ನಟನೆ, ಸಾಮಾಜಿಕ ಸೇವೆ, ಬಡವರಿಗೆ ನೆರವು ಸೇರಿದಂತೆ ಪುನೀತ್ ರವರು ಮಾಡಿರುವ ಸೇವೆ ಅನನ್ಯ. ಈ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಲಾಗಿದೆ ಎನ್ನುತ್ತಾರೆ ಈ ವಾರ್ಡ್ ನ ಕಾರ್ಪೊರೇಟರ್ ಜಿ. ಎಸ್. ಗಡಿಗುಡಾಳ್ ಮಂಜುನಾಥ್.
ಇನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ, ಲೈಫ್ ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಎಂಸಿಸಿ ಬಿ ಬ್ಲಾಕ್ ನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ನಡೆಸಲಾಯಿತು. ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ 47ಮಂದಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
