Breaking NewsLatestಜಿಲ್ಲಾ ಸುದ್ದಿರಾಜ್ಯರಾಮನಗರಸುದ್ದಿಸ್ಪೆಷಲ್ ಸ್ಟೋರೀಸ್

ಉದ್ದ ಕೊಕ್ಕಿನ ರಣ ಹದ್ದಿನ ಬಗ್ಗೆ ನಿಮಗೆಷ್ಟು ಗೊತ್ತು? ವರ್ಷಕ್ಕೆ ಇಡೋದು ಒಂದೇ ಮೊಟ್ಟೆ

ರಾಜೇಶ್ ಕೊಂಡಾಪುರ

ರಾಮನಗರ: ನಗರದ ರಾಮದೇವರ ಬೆಟ್ಟದಲ್ಲಿ ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದು ಮೊಟ್ಟೆ ಇಟ್ಟು,  ಮರಿಗೆ ಜನ್ಮ ನೀಡಿದ್ದು, ಅನೇಕ ವರ್ಷಗಳ ನಂತರ ರಣಹದ್ದು ಸಂತಾನೋತ್ತತ್ತಿ ಕಾರ್ಯ ಯಶಸ್ವಿ ಆಗಿದೆ.

ಇಲ್ಲಿನ ರಾಮದೇವರ ಬೆಟ್ಟವು ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದ್ದು, ಇದನ್ನು ಸರ್ಕಾರ ರಣಹದ್ದು ಸಂರಕ್ಷಣಾ ಧಾಮವನ್ನಾಗಿ ಸರಕಾರ ಘೋಷಿಸಿದೆ.ಹಿಂದೊಮ್ಮೆ ಸಾವಿರ ಸಂಖ್ಯೆಯಲ್ಲಿ ಇದ್ದ ರಣಹದ್ದುಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಕಂಡುಬಂದಿವೆ. ಅದರಲ್ಲೂ ಈಚಿನ ವರ್ಷಗಳಲ್ಲಿ ಅವುಗಳ ಸಂತಾನೋತ್ಪತ್ತಿ ಕಾರ್ಯ ಯಶಸ್ವಿ ಆಗಿರಲಿಲ್ಲ. ಹೀಗಾಗಿ ಈ ಜಾತಿಯ ಹದ್ದುಗಳ ಸಂತತಿ ಸಂಪೂರ್ಣ ನಶಿಸಬಹುದು ಎನ್ನುವ ಆತಂಕ ಪರಿಸರ ಪ್ರಿಯರದ್ದಾಗಿತ್ತು.

ಕಳೆದ 14 ದಿನಗಳ ಹಿಂದೆ ಹದ್ದುಗಳ ಜೊತೆ ಮರಿ ಕಂಡು ಬಂದಿದ್ದು, ಸುರಕ್ಷಿತವಾಗಿದೆ. ಇದು ಅಳಿವಿನಂಚಿನಲ್ಲಿರುವ ರಣಹದ್ದು ಸಂಕುಲದ ಬೆಳವಣಿಗೆಗೆ ಪೂರಕ ಎನ್ನುವ ಭಾವನೆ ಮೂಡಿಸಿದೆ.

ವರ್ಷಕ್ಕೊಂದೇ ಮೊಟ್ಟೆ

ಉದ್ದಕೊಕ್ಕಿನ ರಣಹದ್ದುಗಳು ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ನವೆಂಬರ್ ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟ ಇಟ್ಟು ಮರಿಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಟ್ಟೆಯಿಟ್ಟ ಸುಮಾರು 55-60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ. ಇದೀಗ ರಾಮದೇವರ ಬೆಟ್ಟದಲ್ಲಿ ರಣಹದ್ದು ತನ್ನ ಮರಿಗೆ ಜನ್ಮ ನೀಡಿದ್ದು, ಸುರಕ್ಷತಿವಾಗಿ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆಹಾರ ಪೂರೈಸಲು  ಚಿಂತನೆ

ಪ್ರತಿ ದಿನ ಆಹಾರ ಹುಡಕುತ್ತಾ ನೂರಾರು ಕಿ.ಮೀ. ಹಾರುವ ಸಾಮರ್ಥ್ಯವನ್ನು ರಣಹದ್ದುಗಳು ಹೊಂದಿವೆ. ಆದರೂ ಈ ಬಾರಿ ಅಪರೂಪಕ್ಕೆ ಎಂಬಂತೆ ಮರಿ ಆಗಿರುವುದರಿಂದ ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ರಣಹದ್ದುಗಳಿಗೆ ಆಹಾರ ದೊರೆಯುವಂತೆ ಮಾಡಲು ವೈದ್ಯರಿಂದ ಅನುಮತಿ ಪಡೆದ ಮಾಂಸವನ್ನು ಸ್ಥಳದಲ್ಲಿಯೇ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಿದ್ದಾರೆ. ಪಕ್ಕದಲ್ಲಿನ ನೀರಿನ ಹೊಂಡವನ್ನು ಸಹ ಶುಚಿಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ.

ಕಳೆದ ಆರು ವರ್ಷಗಳಿಂದ ಹಲವು ಕಾರಣಗಳಿಂದ ರಣ ಹದ್ದುಗಳಲ್ಲಿ ಸಂತಾನೋತ್ತತ್ತಿ ಆಗಿರಲಿಲ್ಲ. ಈಗ ಆಗಿರುವುದು ಖುಷಿ ತಂದಿದೆ. ರಣಹದ್ದು ಮರಿ ಮಾಡಿರುವುದು ಅಪರೂಪದ ಘಟನೆ ಎನ್ನುವಂತೆ ಆಗಿದೆ. 6 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮರಿ ಆಗಿದ್ದು , ಪ್ರಸ್ತುತ ಇಲ್ಲಿ ನಾಲ್ಕು ರಣಹದ್ದುಗಳು ಹಾಗೂ ಒಂದು ಮರಿ ಇದೆ. ಇವುಗಳ ರಕ್ಷಣೆಗೆ ಇಲಾಖೆ ಹಾಗೂ ಸಾರ್ವಜನಿಕರು ಮುಂದಾಗಬೇಕು ಎನ್ನುತ್ತಾರೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟಿನ ಕಾರ್ಯದರ್ಶಿ ಬಿ. ಶಶಿಕುಮಾರ್.

Related Articles

Leave a Reply

Your email address will not be published. Required fields are marked *

Back to top button